ಪೊನ್ನಂಪೇಟೆ ಪೊಲೀಸರಿಂದ ಆಟೋ ರಿಕ್ಷಾ ದಾಖಲೆ ಪರಿಶೀಲನೆ; ಹೆಲ್ಮೆಟ್ ಧರಿಸದ ಸವಾರರಿಗೆ ದಂಡ
ಪೊನ್ನಂಪೇಟೆ, ಜು. 17: ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ ಹಾಗೂ ಸಾರ್ವಜನಿಕರ ಸುರಕ್ಷತೆಯ ಉದ್ದೇಶದಿಂದ ಪೊನ್ನಂಪೇಟೆ ಪೊಲೀಸರು ಶುಕ್ರವಾರ ವಿಶೇಷ ವಾಹನ ತಪಾಸಣಾ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯ ವೇಳೆ ಆಟೋ ರಿಕ್ಷಾಗಳ ಪಿ.ಪಿ.ಎಸ್. ಸಂಖ್ಯೆ ಫಲಕ ಹಾಗೂ ವಾಹನಗಳ ದಾಖಲೆಗಳನ್ನು ಪರಿಶೀಲಿಸಲಾಯಿತು.
ವಿಮೆ, ನೋಂದಣಿ ಪ್ರಮಾಣಪತ್ರ (ಆರ್.ಸಿ.), ಚಾಲನಾ ಪರವಾನಗಿ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳು ಸಮರ್ಪಕವಾಗಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ಇದೇ ವೇಳೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಲಾಯಿತು.
ಜೊತೆಗೆ ಹೆಲ್ಮೆಟ್ ಧರಿಸುವುದರಿಂದ ಜೀವ ರಕ್ಷಣೆ ಸಾಧ್ಯವಾಗುತ್ತದೆ ಎಂಬ ಅರಿವು ಮೂಡಿಸಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಸಲಹೆ ನೀಡಿದರು. "ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು" ಎಂದು ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ವಿಶೇಷ ವಾಹನ ತಪಾಸಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು. ಕಾರ್ಯಾಚರಣೆಯಲ್ಲಿ ಎಎಸ್‌ಐ ಕೃಷ್ಣ, ಸಿಬ್ಬಂದಿಗಳಾದ ಮಹಮದ್ ಅಲಿ, ಸಂತೋಷ್, ವೇಣುಗೋಪಾಲ್, ವಿದ್ಯಾ ಬೆಳವಿ, ರಮ್ಯಾ ಹಾಗೂ ಚಾಲಕ ಬೀರಲಿಂಗ ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
1
Angry
0
Sad
0
Wow
0
