ಪೊನ್ನಂಪೇಟೆ: ಬಿರುನಾಣಿಯಲ್ಲಿ 90ಲಕ್ಷ ರೂ ವೆಚ್ಚದಲ್ಲಿ ನೂತನ 11ಕೆವಿ ವಿದ್ಯುತ್ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ
ಪೊನ್ನಂಪೇಟೆ :ತಾಲ್ಲೂಕಿನ ಬಿರುನಾಣಿ ಗ್ರಾಮಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ವಿಶೇಷವಾಗಿ ಈ ಭಾಗದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ಶಾಸಕರು, ರೂ 90ಲಕ್ಷ ವೆಚ್ಚದಲ್ಲಿ ನೂತನ 11 ಕೆವಿ ಹೆಚ್ ಟಿ ವಿದ್ಯುತ್ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ, ಹಲವು ನೂತನ ವಿದ್ಯುತ್ ಪರಿವರ್ತಕಗಳನ್ನು ಲೋಕಾರ್ಪಣೆ ಮಾಡಿದರು. ಬಳಿಕ ಸಾರ್ವಜನಿಕರ ಉದ್ದೇಶಿಸಿ ಮಾತನಾಡಿದ ಶಾಸಕರು, ಕ್ಷೇತ್ರಾದ್ಯಂತ ಉತ್ತಮ ವಿದ್ಯುತ್ ಪೂರೈಸಿ ಕೃಷಿಕರಿಗೆ ಹಾಗೂ ಗ್ರಾಹಕರಿಗೆ ನಿರಂತರವಾಗಿ ತಡೆರಹಿತ ವಿದ್ಯುತ್ ನೀಡಲು ಸರ್ಕಾರದ ವತಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ತಮ ಗುಣಮಟ್ಟದ ನೂತನ ವಿದ್ಯುತ್ ಮಾರ್ಗಗಳನ್ನು ಅಳವಡಿಸುವುದರೊಂದಿಗೆ, ನೂತನ ವಿದ್ಯುತ್ ಪರಿವರ್ತಕಗಳನ್ನು ಹಾಗೂ ಸಬ್ ಸ್ಟೇಷನ್ ಗಳನ್ನು ಕ್ಷೇತ್ರಾದ್ಯಂತ ಕೈಗೊಂಡಿರುವುದು ತಿಳಿಸಿದರು.
ಈ ಸಂದರ್ಭದಲ್ಲಿ ತಮ್ಮ ಅಹವಾಲುಗಳನ್ನು ಶಾಸಕರಲ್ಲಿ ಹೇಳಿಕೊಂಡ ಸಾರ್ವಜನಿಕರನ್ನು ಮಾತನಾಡಿಸಿ ಆದ್ಯತೆ ಮೇರೆಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಅಧ್ಯಕ್ಷರಾದ ಅಣ್ಣಳಮಾಡ ಲಾಲಾ ಅಪ್ಪಣ್ಣ, ವಲಯ ಅಧ್ಯಕ್ಷರಾದ ಕುಪ್ಪಣ್ಣಮಾಡ ಪ್ರೀತಮ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ಸ್ಥಳೀಯ ಪ್ರಮುಖರಾದ ಬುಟಿಯಂಡ ತಂಬಿ, ಬೊಳೇರ ಅಪುಟ್ಟ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.