ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

Jul 31, 2026 - 17:45
 0  63
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

ಗೋಣಿಕೊಪ್ಪ ; ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಳ್ಳಿಮಾಡ ಸಿ. ಕರುಂಬಯ್ಯ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಪತ್ರಕರ್ತರು ಮತ್ತು ಬಸ್ ಸೇವಕರ ಸಂಗಮಕ್ಕೆ ವೇದಿಕೆಯಾಯಿತು.

    ಗ್ರಾಮೀಣ ಪ್ರದೇಶಕ್ಕೆ ಬಸ್ ಮೂಲಕ ಪತ್ರಿಕೆ ಮುಟ್ಟಿಸುತ್ತಿರುವ ಹಿರಿಯ ಮತ್ತು ಕಿರಿಯ ಬಸ್ ಸೇವಕರಿಕೆ ಸನ್ಮಾನದ ಗೌರವಾರ್ಪಣೆ ಮೂಲಕ ಬಸ್ ಸೇವೆಯನ್ನು ನೆನೆಪಿಸಿಕೊಳ್ಳುವಂತೆ ಕಾರ್ಯಕ್ರಮ ಮೂಡಿ ಬಂತು.

   ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಜಗದೀಶ್ವರ ಬಸ್ ಮೂಲಕ ಪತ್ರಿಕೆಯನ್ನು ಗ್ರಾಮಕ್ಕೆ ಮುಟ್ಟಿಸುತ್ತಿದ್ದ ಬಸ್ ಮಾಲೀಕ ಕೆ. ಬೈಗೋಡು ಗ್ರಾಮದ ದಿ. ಮುರುವಂಡ ಎಂ. ಬೋಜಪ್ಪ ಅವರ ಪುತ್ರ ಮುರುವಂಡ ಬಿ. ನೀಲಕಂಠ ಮೊಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಇವರ ಪತ್ನಿ ಉಷಾ ಮೊಣ್ಣಪ್ಪ ಕೂಡ ಸನ್ಮಾನ ಸ್ವೀಕರಿಸಿದರು. ಜಗದೀಶ್ವರ ಮತ್ತು ಕೂರ್ಗ್ ಯೂನಿಯನ್ ಬಸ್ ಚಾಲಕರಾಗಿ ಆಗಿ ಸೇವೆ ನೀಡಿರುವ ಅಮ್ಮತ್ತಿ ಗ್ರಾಮದ ಕಾವಾಡಿಚಂಡ ಬಿ. ಕಾಳಪ್ಪ ಮತ್ತು ಅವರ ಪತ್ನಿ ಮುತ್ತಮ್ಮ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ಅಶೋಕ ಬಸ್ ನಿರ್ವಾಹಕರಾಗಿ ಇಂದಿನ ಪೀಳಿಗೆಯಲ್ಲೂ ಕೂಡ ಆಗಿ ಸೇವೆ ನೀಡುತ್ತಿರುವ ಮಾದಾಪುರ ಗ್ರಾಮದ ಮಂಡೀರ ಜೆ. ಮಿಥುನ್ ಮದನ್ ಸನ್ಮಾನ ಸ್ವೀಕರಿಸಿದರು.

  ಸುಮಾರು 4 ಕ್ಕಿಂತ ಹೆಚ್ಚು ವರ್ಷ ಬಸ್ ಮೂಲಕ ಸೇವೆ ನೀಡಿದ ಸೇವಕರನ್ನು ಸನ್ಮಾನಕ್ಕೆ ಪರಿಗಣಿಸಿರುವ ಬಗ್ಗೆ ಸನ್ಮಾನಿತರು ಹೆಮ್ಮೆ ವ್ಯಕ್ತಪಡಿದರು.

 ಮುರುವಂಡ ಬಿ. ನೀಲಕಂಠ ಮೊಣ್ಣಪ್ಪ ಮಾತನಾಡಿ, ಬಸ್ ಸೇವೆಗೆ ನೀಡಿದ ಗೌರವವನ್ನು ತಂದೆ ಬೋಜಪ್ಪ ಅವರಿಗೆ ಅರ್ಪಿಸಲಾಗಿದೆ ಎಂದು ಭಾವನಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ತಂದೆ ನಿಧನದ ನಂತರ ತಾಯಿ ಬೊಳ್ಯವ್ವ ಬಸ್ ಮಹಿಳಾ ಮಾಲಕಿಯಾಗಿ 5 ದಶಕಗಳ ಕಾಲ ಸೇವೆ ನೀಡಿದ್ದರು. 1950 ರಲ್ಲಿ ಆರಂಭಿಸಿದ ಬಸ್ ಸೇವೆ ಸಾರ್ವಜನಿಕವಾಗಿ ಮನ್ನಣೆ ಪಡೆದುಕೊಂಡಿದೆ. ಪತ್ರಿಕೆಯನ್ನು ಬಸ್ ಮಾರ್ಗದಲ್ಲಿ ಹಂತ ಹಂತವಾಗಿ ತಲುಪಿಸಿರುವ ನೆನೆಪು ಸದಾ ಕಾಡುತ್ತಿದೆ ಎಂದರು. ಮಕ್ಕಳು, ಗರ್ಭಿಣಿ, ಅನಾರೋಗ್ಯ ಪೀಡಿತರನ್ನು ಕೂಡ ಬಸ್‌ನಲ್ಲಿ ಕರೆದುಕೊಂಡು ಹೋಗಿರುವ ನೆನಪುಗಳು ಕೂಡ ಇದೆ. ಮರೆನಾಡ್ ಮಾರ್ಗದಿಂದ ಹಿಂತಿರುಗುವಾಗ ಅನಾರೋಗ್ಯದ ಮಹಿಳೆಯನ್ನು ಕೇರಳದ ಆಸ್ಪತ್ರೆಗ ಸೇರಿಸಲು ಬಸ್‌ನಲ್ಲಿ ಆಸ್ಪತ್ರೆಗೆ ತಲುಪಿಸಿರುವ ಉದಾಹರಣೆ ಕೂಡ ಇದೆ. ಬಸ್ ಕೇವಲ ಸಾರಿಗೆ ವ್ಯವಸ್ಥೆಯಾಗಿ ಉಳಿಯದೆ ಜನರ ಭಾವನಾತ್ಮಕ ಸಂಬAದವಾಗಿತ್ತು ಎಂದು ನುಡಿದರು.

  ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಬಸ್ ಸೇವೆಯನ್ನು ಪರಿಗಣಿಸಿ ಪತ್ರಕರ್ತರು ನೀಡಿರುವ ಗೌರವ ಕಾರ್ಯ ಶ್ಲಾಘನೀಯ. ಸೇವಾ ಭಾವನೆ ಹೊಂದಿರುವ ಬಸ್ ಸೇವಕರು ಅವಶ್ಯಕತೆ ಪ್ರಸ್ತುತ ಅವಶ್ಯವಾಗಿದ್ದು, ಬಸ್ ಸೇವಕರು ಈ ಬಗ್ಗೆ ಪ್ರಯಾಣಿಕರಿಗೆ ಸ್ಪಂದಿಸುವ ಮನೋಭಾವ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

   ಪೊಲೀಸ್ ಉಪ ನಿರೀಕ್ಷಕ ಕಾಳೇಗೌಡ ಮಾತನಾಡಿ, ಸಾರಿಗೆ ವ್ಯವಸ್ಥೆ ಸಾರ್ವಜನಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಪತ್ರಿಕೆಯನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುತ್ತಿದ್ದ ವ್ಯವಸ್ಥೆಯನ್ನು ಗುರುತಿಸಿರುವುದು ಮೆಚ್ಚುಗೆಯ ವಿಷಯವಾಗಿದೆ. ಮಾಧ್ಯಮದ ಜವಾಬ್ದಾರಿಯನ್ನು ಎತ್ತಿ ತೋರಿಸಿದೆ. ಪ್ರೋತ್ಸಾಹ ದೊರೆತಾಗ ಮತ್ತಷ್ಟು ಸೇವೆಯನ್ನು ನಿರೀಕ್ಷಿಸಲು ಸಾಧ್ಯವಾಗಿದೆ. ವಾಹನ ದಟ್ಟಣೆ ನಿಭಾಯಿಸಲು ಮಾಧ್ಯಮ ಮತ್ತು ಬಸ್ ಹಾಗೂ ವಾಹನ ಚಾಲಕರುಗಳ ಸ್ಪಂಧನೆ ಮುಖ್ಯ ಎಂದರು.

   ಜಗದೀಶ್ ಜೋಡುಬೀಟಿ ಕಾರ್ಯಕ್ರಮ ನಿರೂಪಿಸಿ ಮಾತನಾಡಿ, ರಾಜ್ಯದಲ್ಲಿ ಉತ್ತಮ ಕಾರ್ಯಕ್ರಮವಾಗಿ ಬಸ್ ಸೇವಕರ ಸನ್ಮಾನ ಕಾರ್ಯಕ್ರಮ ಮೂಡಿ ಬಂದಿದೆ ಎಂದರು.

  ತಾಲೂಕು ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ. ವಿ. ಅರುಣ್‌ಕುಮಾರ್, ನಿರ್ದೇಶಕರ ಚಿಮ್ಮಣಮಾಡ ದರ್ಶನ್ ದೇವಯ್ಯ, ಸದಸ್ಯರುಗಳಾದ ಮನೋಜ್‌ಕುಮಾರ್, ಎಚ್. ಕೆ. ಜಗದೀಶ್, ಸಿಂಗಿ ಸತೀಶ್ ಶುಭ ಕೋರಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0