ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆ: ಸಾಧಕರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ
admincoorgdaily

ಕುಶಾಲನಗರ, ಜುಲೈ , 30: ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಜನತೆಗೆ ನೈಜ ಸಂಗತಿ ತಿಳಿಸುವ ಕೆಲಸವನ್ನು ಮಾಡುವ ಪತ್ರಿಕೆಗಳ ಪಾತ್ರ ದೊಡ್ಡದು ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ನ ವತಿಯಿಂದ ಕುಶಾಲನಗರ ಪಟ್ಟಣದ ಎ.ಪಿ.ಸಿ.ಎಂ.ಎಸ್.ನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಗುರುವಾರ (ಜುಲೈ 30 ರಂದು) ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಸಾಧಕರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ, ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಹತ್ತರ ಜವಾಬ್ದಾರಿ ಹೊತ್ತಿರುವ ಪತ್ರಿಕಾ ಮಾಧ್ಯಮ ಮತ್ತು ಪತ್ರಕರ್ತರು ಸಮಾಜದ ಬೆಳವಣಿಗೆಗೆ ತಮ್ಮದೇ ಪಾತ್ರ ಹೊಂದಿದ್ದಾರೆ. ಉತ್ತಮ ಶಿಕ್ಷಣದ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು. ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಎಚ್.ಎಂ.ರಘು ತಮ್ಮ ತಂಡದವರ ಜತೆ ಸೇರಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸ್ವಾಮೀಜಿ ಹೇಳಿದರು. ನಿವೃತ್ತ ಚಿತ್ರಕಲಾ ಶಿಕ್ಷಕರೂ ಆದ ಚಿಂತಕ ಉ.ರಾ.ನಾಗೇಶ್ ಮಾತನಾಡಿ, ಸಮಾಜದಲ್ಲಿ ನಡೆಯುವ ನೈಜ ಸಂಗತಿಗಳನ್ನು ಕನ್ನಡಿಯಂತೆ ಜನರ ಮುಂದೆ ಇಡುವ ಪತ್ರಿಕಾ ಮಾಧ್ಯಮವು ಓದುಗರ ವಿಶ್ವಾಸ ಗಳಿಸುತ್ತಿದೆ ಎಂದರು. ಸಮಾಜದಲ್ಲಿ ನಡೆಯುವ ನೈಜ ಸಂಗತಿಗಳನ್ನು ಕನ್ನಡಿಯಂತೆ ಜನರ ಮುಂದೆ ಇಡುವ ಪತ್ರಿಕಾ ಮಾಧ್ಯಮವು ಓದುಗರ ವಿಶ್ವಾಸ ಗಳಿಸುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಕ್ಷಣಮಾತ್ರದ ಸುದ್ದಿಗಳು ಪ್ರಚಲಿತವಾಗುತ್ತಿದ್ದರೂ ಇಂದು ಪತ್ರಿಕಾ ಮಾಧ್ಯಮಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿದೆ ಎಂದು ನಾಗೇಶ್ ಹೇಳಿದರು.
ರೋಟರಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ಸಮಾಜಮುಖಿ ಕೆಲಸ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸುತ್ತಿರುವುದು ಉತ್ತಮ ಕೆಲಸವಾದುದು. ಪ್ರತಿಯೊಬ್ಬರೂ ತಮ್ಮನ್ನು ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಎಂ.ರಘು ಮಾತನಾಡಿ, ಸಮಾಜಿಮುಖಿ ಕೆಲಸಗಳನ್ನು ಮಾಡುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರೂ ಆದ ಪರಿಸರ ಪ್ರೇಮಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಇಂದು ನಾವು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪ್ರಾಕೃತಿಕ ಸವಾಲುಗಳನ್ನು ಎದುರಿಸಬೇಕಿದೆ ಎಂದರು.
ಸಂಘದ ಕೋಶಾಧಿಕಾರಿ ಭರಮಣ್ಣ ಟಿ.ಬೆಟಗೇರಿ, ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಆರ್.ಪ್ರಭಾಕರ್, ಸಮಾಜ ಸೇವಕಿ ಪುಷ್ಪ,ಅನುಗ್ರಹ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಬಿ.ಡಿ.ಚೈತ್ರ, ದಸಂಸ( ಅಂಬೇಡ್ಕರ್ ಮಾರ್ಗ ) ಜಿಲ್ಲಾಧ್ಯಕ್ಷ ಕೆ.ಬಿ.ರಾಜು, ವೈದ್ಯ ಡಾ ಗಯಾ ಕುಶಲ್,ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ವಿಜಯೇಂದ್ರ ಇತರರು ಇದ್ದರು. ಶಿಕ್ಷಕಿ ಎಚ್.ಎಸ್. ರಶ್ಮಿ ನಿರ್ವಹಿಸಿದರು.
ಸದಾಶಿವ ಸ್ವಾಮೀಜಿಗೆ ಕಾಯಕ ಯೋಗಿ ಪ್ರಶಸ್ತಿ: ಇದೇ ವೇಳೆಯಲ್ಲಿ ಸಂಘದ ವತಿಯಿಂದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾವೇರಿ ರತ್ನ ಪ್ರಶಸ್ತಿ ಪುರಸ್ಕೃತರು: ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 19 ಮಂದಿಗೆ ಸಂಘದ ವತಿಯಿಂದ 'ಕಾವೇರಿ ರತ್ನ' ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಗಿರೀಶ್ ಪಗಡಿಗತ್ತಲ, ಮನು ಪೆಮ್ಮಯ್ಯ, ಡಾ ಬಿ.ಡಿ.ಚೈತ್ರ, ಡಾ ಗಯಾ ಕುಶಲ್,ಎಚ್.ಸಿ.ಶೀಲಾ, ಎಸ್.ಆರ್.ಹರೀಶ್,,ಎಂ.ಬಿ.ಮುನೀರ್, ಎನ್.ಎಲ್.ಸುರೇಶ್ ಕುಮಾರ್, ಕುಮಾರಿ ಜಿ.ಎಂ.ಸಿಂಚನ,ಕೆ.ಆರ್.ಲಕ್ಷ್ಮಿ ಸಂತೋಷ್ ಗೊಬ್ಬಳಿ, ಎಚ್.ಜೆ.ಸಂಕೇತ್, ಅಂತೋಣಿ ಪ್ರಭು, ಕನ್ನಡಿಗ ಆನಂದ್ ಗೌಡ, ಶಿವಕುಮಾರ್, ನಶ್ಮಿತ ಜಿ.ಶ್ರೀನಿವಾಸ್, ಎಸ್.ಎಸ್.ಮೋಹನ್ ಕುಮಾರ್, ಕುಮಾರಿ ಪಿ.ಚರಿತ,ಮಲ್ಲಂಡ ಭಾರತಿ ದೇವಯ್ಯ, ನಂಗಾರು ಜಗ ಅವರಿಗೆ ಕಾವೇರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಾಯಕ ಎಸ್.ಹರೀಶ್ ( ಅಭಿ ) ಕನ್ನಡ ಗೀತೆಗಳನ್ನು ಹಾಡಿ ಪ್ರೇಕ್ಷಕರ ಗಮನ ಸೆಳೆದರು.