ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ‌ಸಂಘಕ್ಕೆ 65ಲಕ್ಷ ರೂ ಲಾಭ

Aug 5, 2026 - 15:23
 0  78
ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ‌ಸಂಘಕ್ಕೆ 65ಲಕ್ಷ ರೂ ಲಾಭ

ಶನಿವಾರಸಂತೆ:-ಸಹಕಾರಿ ಸದಸ್ಯರು ಕೃಷಿ ಪತ್ತಿನ ಸಂಘದಲ್ಲಿ ಸಾಲ, ವ್ಯವಹಾರ ನಡೆಸಿದರೆ ಸಂಘವು ಹೆಚ್ಚಿನ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎಸ್.ಸಿ.ಶರತ್‌ ಶೇಖರ್ ಮನವಿ ಮಾಡಿದರು.

 ಬುಧವಾರ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಘದ ಸದಸ್ಯರು ನಮ್ಮ ಸಂಘದಲ್ಲಿ ಕೃಷಿ ಸಾಲ ಅಲ್ಲದೆ ಎಲ್ಲಾ ರೀತಿಯ ಸಾಲ ಸೌಲಭ್ಯ ಮತ್ತು ವ್ಯವಹಾರ ನಡೆಸಿದರೆ ಸಂಘವು ಹೆಚ್ಚಿನ ಲಾಭಗಳಿಸುತ್ತದೆ ಹಾಗೂ ಅಭಿವೃದ್ದಿ ಹೊಂದುತ್ತದೆ ಎಂದರು.

ಪ್ರಸ್ತುತ ನಮ್ಮ ಸಂಘವು 65 ಲಕ್ಷಕಿಂತ ಹೆಚ್ಚಿನ ಲಾಭಗಳಿಸಿದೆ ಮುಂದಿನ ವರ್ಷ ಮತ್ತಷ್ಟು ಲಾಭ ತಂದು ಕೊಡಲು ಪ್ರಯತ್ನಿಸಲಾಗುವುದು ಎಂದ ಅವರು, ಸಂಘವು ಸದಸ್ಯರಿಗೆ ಕೃಷಿ ಭೂಮಿ ಆಧಾರಿತ ಸಾಲ ನೀಡುವುದರ ಜೊತೆಯಲ್ಲಿ ಸಂಘದಲ್ಲಿ ಸಾಲಗಾರಲ್ಲದ ಸದಸ್ಯರಿಗೆ 50 ಸಾವಿರದ ವರೆಗೆ ಹಸು, ಕುರಿ ಸಾಕಾಣಿಕೆ ಮಾಡಲು ಸಾಲವನ್ನು ನೀಡುತ್ತಿದೆ.

 ಸಹಕಾರಿ ಸದಸ್ಯರು ಸಂಘದಲ್ಲಿ ಮಾಡಿದ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಿದರೆ ಮಾತ್ರ ಸಂಘವು ಅಭಿವೃದ್ದಿ ಹೊಂದುತ್ತದೆ ಈ ನಿಟ್ಟಿನಲ್ಲಿ ಸದಸ್ಯರು ಸಕಾಲದಲ್ಲಿ ಸಾಲವನ್ನು ಮರು ಪಾವತಿಸುವಂತೆ ಮನವಿ ಮಾಡಿದರು.

ಸಂಘದಲ್ಲಿ 2026ನೇ ಸಾಲಿಗೆ ಅನ್ವಯವಾಗುವಂತೆ 2018 ಮಂದಿ ಸದಸ್ಯರಿದ್ದು ಸದಸ್ಯರ ಪಾಲು ಹಣ 1 ಕೋಟಿ 31 ಲಕ್ಷದ 16 ಸಾವಿರ ಇದ್ದು ಹಾಗೂ ಸಂಘದ ವಿವಿಧ ನಿಧಿಗಳಿಂದ 3 ಕೋಟಿ 73 ಲಕ್ಷದ 15 ಸಾವಿರದ 675 ರು ಇರುತ್ತದೆ ಎಂದು ಸಂಘದ ಸಿಇಒ ನೀತುಚಂದ್ರ ಅವರು ಸಂಘದ ವರದಿ ಮಂಡನೆ ಸಂದರ್ಭ ತಿಳಿಸಿದರು.

 ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಸವಿತಾ ಸತೀಶ್, ನಿರ್ದೇಶಕರಾದ ಎಸ್.ವಿ.ಜಗದೀಶ್, ಎಸ್.ಎನ್.ರಘು, ಸಿ.ಜೆ.ಗಿರೀಶ್, ಎ.ಆರ್.ರಕ್ಷಿತ್, ಎಸ್.ಯು.ಆನಂದ್, ಹೊನ್ನರಾಜಪ್ಪ, ಸುದರ್ಶನ್, ಸಿ.ಎಚ್.ರೂಪಾ, ಆಶಾರಾಣಿ, ಮಂಜಯ್ಯ, ಕೆಡಿಸಿಸಿ ಮೇಲ್ವಿಚಾರಕ ತುಂಗರಾಜ್ ಮತ್ತು ಸಂಘದ ಸಿಬ್ಬಂದಿ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0