ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಿದ ಪ್ರಿನ್ಸಿಪಾಲ್!

Dec 1, 2025 - 23:17
 0  2.2k
ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಿದ ಪ್ರಿನ್ಸಿಪಾಲ್!

ಚಿಕ್ಕಮಗಳೂರು, ಡಿ.1: ದತ್ತ ಜಯಂತಿ ಮಹೋತ್ಸವದ ಸಿದ್ಧತೆಗಳು ಜೋರಾಗಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಶಬರಿಮಲೆ ಅಯ್ಯಪ್ಪ ಮಾಲೆ ತೊಟ್ಟಿದ್ದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಿದ ಘಟನೆ ಉದ್ವಿಗ್ನತೆ ಸೃಷ್ಟಿಸಿದೆ. ನಗರದ ಎಂಇಎಸ್ ಪಿಯು ಕಾಲೇಜಿನಲ್ಲಿ ಸಂಭವಿಸಿದ ಈ ಘಟನೆ ಸ್ಥಳೀಯ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.

ನಗರದ ಎಂಇಎಸ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ತರಗತಿಗೆ ಹಾಜರಾದರು. ಸಮವಸ್ತ್ರ ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣ ನೀಡಿ ಪ್ರಿನ್ಸಿಪಾಲ್‌ ಮಾಲೆ ತೆಗೆದು ಬರಬೇಕೆಂದು ಸೂಚನೆ ನೀಡಿ, ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದರೆಂದು ತಿಳಿದುಬಂದಿದೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಹಲವು ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಕಾಲೇಜು ಬಳಿ ಜಮಾಯಿಸಿದರು. ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಹೊರಹಾಕಿದರೆ ನೂರಾರು ವಿದ್ಯಾರ್ಥಿಗಳಿಗೆ ಮಾಲೆ ಹಾಕಿಸುವುದಾಗಿ ಎಚ್ಚರಿಕೆ ನೀಡಿದರು. ಸ್ಥಳದ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಬಸವನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ನಡೆದ ಮಾತುಕತೆಯಲ್ಲಿ, ಪ್ರಿನ್ಸಿಪಾಲ್‌ ನಿಯಮಕ್ಕೆ ತಾತ್ಕಾಲಿಕ ಸಡಿಲಿಕೆ ನೀಡಿ, ಅಯ್ಯಪ್ಪ ಮಾಲೆ ಧರಿಸಿದ್ದ ಮೂವರು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಿದರು. ಜೊತೆಗೆ ಸಮವಸ್ತ್ರ ನೀತಿ ಹಾಗೂ ಸಂಬಂಧಿತ ಸೂಚನೆಗಳ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

What's Your Reaction?

Like Like 1
Dislike Dislike 0
Love Love 1
Funny Funny 1
Angry Angry 5
Sad Sad 1
Wow Wow 1