ಹೋಟೆಲ್, ರೆಸ್ಟೋರೆಂಟ್ ಹಾಗೂ ಉಪಹಾರ ಗೃಹಗಳಲ್ಲಿ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಬಿಸಿ ನೀರು ಒದಗಿಸಿ:ಡಾ.ಅನಿಲ್ ಧಾವನ್
admincoorgdaily

ಮಡಿಕೇರಿ:-ಜಿಲ್ಲೆಯಲ್ಲಿ ಪ್ರಸ್ತುತ ಮಳೆಗಾಲವಾಗಿದ್ದು, ಶೀತ, ನೆಗಡಿ, ಕೆಮ್ಮು ಹಾಗೂ ಸಾಂಕ್ರಾಮಿಕ ಖಾಯಿಲೆಗಳು ಹೆಚ್ಚಾಗುವ ಸಂಭವವಿರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಗ್ರಾಹಕರಿಗೆ ಆದ್ಯತೆಯ ಮೇರೆಗೆ ಹೋಟೆಲ್, ರೆಸ್ಟೋರೆಂಟ್ ಹಾಗೂ ಉಪಹಾರ ಗೃಹಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಶುದ್ದ ಕುಡಿಯುವ ನೀರು ಹಾಗೂ ಶುದ್ದ ಬಿಸಿ ನೀರನ್ನು ಉಚಿತವಾಗಿ ನೀಡಲು ಸೂಚಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಕಲಂ 30(2)(ಡಿ) ರನ್ವಯ ಆಹಾರ ಸುರಕ್ಷತಾ ಆಯುಕ್ತರ ಪ್ರದತ್ತವಾದ ಅಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ) ನಿಯಮಾವಳಿ, 2011 ರ ಅನುಸೂಚಿ-4 ರಂತೆ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಉಪಹಾರ ಗೃಹಗಳಲ್ಲಿ ಉಚಿತವಾಗಿ ಸುರಕ್ಷಿತ ಕುಡಿಯುವ ನೀರು ಒದಗಿಸುವುದನ್ನು ಕಡ್ಡಾಯಗೊಳಿಸಿದ್ದು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ನಿರಾಕರಿಸುವಂತಿಲ್ಲ. ಗ್ರಾಹಕರಿಗೆ ಶುದ್ಧ ಕುಡಿಯುವ ನೀರನ್ನು ನೀಡದೇ ಇದ್ದ ಪಕ್ಷದಲ್ಲಿ ಎಫ್‍ಎಸ್‍ಎಸ್‍ಎಐ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ 1915 ಗೆ ದೂರನ್ನು ಸಲ್ಲಿಸಬಹುದಾಗಿದೆ.
ಈ ಸಲಹೆಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006, ಅದರಡಿ ರೂಪಿಸಲಾದ ನಿಯಮಾವಳಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಹೊರಡಿಸಲಾಗಿದೆ.
ಸಾರ್ವಜನಿಕರಿಗೆ, ಹೋಟೆಲ್, ರೆಸ್ಟೋರೆಂಟ್, ಉಪಹಾರ ಗೃಹಗಳಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಜರುಗಿಸಲಾಗುತ್ತಿರುವ ಕ್ರಮಗಳ ಬಗ್ಗೆ, ಮಾಹಿತಿ ನೀಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಡಾ.ಅನಿಲ್ ಧಾವನ್ ಇ. ಅವರು ತಿಳಿಸಿದ್ದಾರೆ.