Kodagu

ಕರ್ಮಯೋಗಿ ಅಭಿಯಾನ’ದಡಿ ಜನತಾ ಅಹವಾಲು ಸ್ವೀಕಾರ ಸಭೆ

admincoorgdaily

ಕರ್ಮಯೋಗಿ ಅಭಿಯಾನ’ದಡಿ ಜನತಾ ಅಹವಾಲು ಸ್ವೀಕಾರ ಸಭೆ

ಗೋಣಿಕೊಪ್ಪ: ಪೊನ್ನಂಪೇಟೆ ವ್ಯಾಪ್ತಿಯ ಹಾಡಿ ನಿವಾಸಿಗಳ ವಿವಿಧ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸುವ ಉದ್ದೇಶದಿಂದ ‘ಆದಿ ಕರ್ಮಯೋಗಿ ಅಭಿಯಾನ’ದಡಿ ಜನತಾ ಅವಾಲು ಸ್ವೀಕಾರ ಸಭೆ ಮರೂರು ಗಿರಿಜನ ಆಶ್ರಮ ಶಾಲೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಭಾಗೀರತಿ ವಹಿಸಿದ್ದರು.

ಸಭೆಯಲ್ಲಿ ಹಾಡಿಗಳ ನಿವಾಸಿಗಳ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿದರು. ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಸೇರಿದಂತೆ ವಿವಿಧ ಸರ್ಕಾರಿ ದಾಖಲೆಗಳನ್ನು ಪಡೆಯುವಲ್ಲಿ ಎದುರಾಗುತ್ತಿರುವ ತೊಡಕುಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರು. ವಿಶೇಷವಾಗಿ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂದು ಹಾಡಿಗಳ ನಿವಾಸಿಗಳು ತಿಳಿಸಿದರು.

 ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು, ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಭೆಯ ಮೂಲಕ ಹಾಡಿಗಳ ನಿವಾಸಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಯೋಜನೆಗಳ ಪ್ರಯೋಜನ ತಲುಪಿಸುವ ಜೊತೆಗೆ, ಅಗತ್ಯ ದಾಖಲೆಗಳನ್ನು ಹೊಂದಿಸಿಕೊಡುವ ಕಾರ್ಯಕ್ಕೆ ಆದ್ಯತೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾಧಿಕಾರಿ ಭಾಗೀರತಿ, ಮಾಜಿ ಜಿಪಂ ಸದಸ್ಯೆ ಪಂಕಜ, ಪ್ರಮುಖರುಗಳಾದ ಸಿದ್ದಪ್ಪ, ತಾಲೂಕು ಯೋಜನಾಧಿಕಾರಿ ತೇಜ್‌ರಾಜ್ ಹೊಸಬಾಳೆ, ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.