ಕೊಡಗು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ: 29,011 ಮಕ್ಕಳಿಗೆ ಲಸಿಕೆ ಗುರಿ

ಕೊಡಗು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ: 29,011 ಮಕ್ಕಳಿಗೆ ಲಸಿಕೆ ಗುರಿ

ಮಡಿಕೇರಿ, ಜೂ. 26: ಜೂನ್ 28ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ 0-5 ವರ್ಷದೊಳಗಿನ 29,011 ಮಕ್ಕಳಿಗೆ ಪೋಲಿಯೋ ಹನಿ ಹಾಕಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ 26,373 ಹಾಗೂ ನಗರ ಪ್ರದೇಶದಲ್ಲಿ 2,638 ಮಕ್ಕಳನ್ನು ಗುರುತಿಸಲಾಗಿದೆ. ಜಿಲ್ಲೆಯಾದ್ಯಂತ 471 ಲಸಿಕಾ ಬೂತ್‌ಗಳನ್ನು ತೆರೆಯಲಾಗುತ್ತಿದ್ದು, ಬಸ್ ನಿಲ್ದಾಣ, ಪ್ರವಾಸಿ ತಾಣಗಳು, ಜನಸಂದಣಿ ಪ್ರದೇಶಗಳಲ್ಲಿ 33 ಟ್ರಾನ್ಸಿಟ್ ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 1 ಸಂಚಾರಿ ತಂಡ ಕಾರ್ಯನಿರ್ವಹಿಸಲಿದೆ.

ವಲಸೆ ಕಾರ್ಮಿಕರ ಮಕ್ಕಳಿಗೆ ಒತ್ತು*: ಜಿಲ್ಲೆಯಲ್ಲಿ 1,615 ವಲಸೆ ಪ್ರದೇಶಗಳನ್ನು ಗುರುತಿಸಲಾಗಿದ್ದು, ಒಟ್ಟು 10,833 ವಲಸಿಗರಲ್ಲಿ 1,297 ಮಕ್ಕಳು 0-5 ವರ್ಷದೊಳಗಿನವರಿದ್ದಾರೆ. ಸ್ಥಿರ ವಾಸಿತ ವಲಸೆ ಪ್ರದೇಶ 496 ಇದ್ದು, ಅಲ್ಲಿ 15,927 ಮಕ್ಕಳನ್ನು ಗುರುತಿಸಲಾಗಿದೆ.

ಲಸಿಕೆ ಕಾರ್ಯಕ್ಕೆ 1,952 ಲಸಿಕೆದಾರರು ಹಾಗೂ 84 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ 2 ಹಾಗೂ 3ನೇ ದಿನ, ನಗರ ಭಾಗದಲ್ಲಿ 2ರಿಂದ 4ನೇ ದಿನದವರೆಗೆ ಮನೆ-ಮನೆ ಭೇಟಿ ನೀಡಿ ಲಸಿಕೆ ನೀಡಲಾಗುವುದು. ಇದಕ್ಕಾಗಿ 1,42,030 ಮನೆಗಳಿಗೆ ಭೇಟಿ ನೀಡಲು 976 ತಂಡಗಳನ್ನು ರಚಿಸಲಾಗಿದೆ.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಲಸಿಕೆ ನೀಡಲಿದ್ದಾರೆ. ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೂ ಲಸಿಕೆ ನೀಡಲು ಸೂಚನೆ ನೀಡಲಾಗಿದೆ. ಎಲ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸಂತೆ ನಡೆಯುವ ಸ್ಥಳಗಳಲ್ಲಿ 4 ದಿನಗಳ ಕಾಲ ಟ್ರಾನ್ಸಿಟ್ ಬೂತ್‌ಗಳು ಕಾರ್ಯನಿರ್ವಹಿಸಲಿವೆ.

ಜಿಲ್ಲಾ ಆರೋಗ್ಯಾಧಿಕಾರಿಗಳ ಮನವಿ: "0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸಿ. ನಿಮ್ಮ ಮನೆ, ತೋಟ, ನೆರೆಮನೆಯಲ್ಲಿ ಕಾರ್ಮಿಕರ ಮಕ್ಕಳು ಅಥವಾ ಹೊಸದಾಗಿ ಬಂದ ಕುಟುಂಬದ ಮಕ್ಕಳು ಇದ್ದರೆ ಹತ್ತಿರದ ಬೂತ್‌ಗೆ ಕರೆತನ್ನಿ. ಪಲ್ಸ್ ಪೋಲಿಯೋ ಕಾರ್ಯಕ್ರಮದ ಸದುಪಯೋಗ ಪಡೆಯಿರಿ" ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.