ನಾಪೋಕ್ಲುವಿನ ವಿವಿಧೆಡೆ ಪುತ್ತರಿ ಹಬ್ಬದ ಸಂಭ್ರಮ -ಹಳೇತಾಲೂಕಿನಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಪುತ್ತರಿ ಹಬ್ಬಾಚರಣೆ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ನಾಪೋಕ್ಲುವಿನ ವಿವಿಧೆಡೆ ಕೊಡಗಿನ ಸುಗ್ಗಿಯ ಹಬ್ಬ ಎಂದೆ ಪ್ರಖ್ಯಾತಿಯನ್ನು ಪಡೆದಿರುವ ಪುತ್ತರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ನಾಪೋಕ್ಲು ಬಿಭಾಗದಲ್ಲಿ ಪುತ್ತರಿ ಹಬ್ಬವನ್ನು ಸಾಂಪ್ರದಾಯಿಕ ಆಚರಣೆಗಳೊಂದಿಗೆ,ಪಟಾಕಿ ಬಾಣ ಬಿರುಸುಗಳ ಸದ್ದಿನೊಂದಿಗೆ ವಿವಿಧ ದೇವಾಲಯ,ಐನ್ ಮನೆಗಳಲ್ಲಿ ಹಾಗೂ ಕೊಡವ ಸಮಾಜಗಳಲ್ಲಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಗುರುವಾರ ಪುತ್ತರಿ ಹಬ್ಬದ ಮೊದಲ ಪೂಜೆ ನಡೆಯಿತು.
ಬಳಿಕ ಕೊಡಗು ಜಿಲ್ಲಾಧ್ಯಂತ ವಿವಿಧ ದೇವಾಲಯಗಳಲ್ಲಿ ಹಾಗೂ ಐನ್ ಮನೆಗಳಲ್ಲಿ ಭತ್ತದ ಕದಿರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು.ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ಹಾಗೂ ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಸಾಂಪ್ರದಾಯಿಕ ಆಚರಣೆಯೊಂದಿಗೆ ಪುತ್ತರಿಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
:ಹಳೇ ತಾಲೂಕಿನಲ್ಲಿ ಸೌಹಾರ್ದತೆಯ ಪುತ್ತರಿ ಹಬ್ಬ ಆಚರಣೆ
ನಾಪೋಕ್ಲು ಸಮೀಪದ ಹಳೇ ತಾಲೂಕಿನಲ್ಲಿ ಸೌಹಾರ್ದತೆಯಿಂದ ಪುತ್ತರಿ ಹಬ್ಬವನ್ನು ಆಚರಿಸಲಾಯಿತು.ಹಳೇ ತಾಲೂಕು ನಿವಾಸಿ ಬೊಪ್ಪೇರ ಸಿ.ಕಾವೇರಪ್ಪ ಹಾಗೂ ಅವರ ಮಗ ಜಯ ಉತ್ತಪ್ಪ ಅವರು ತಮ್ಮ ನಿವಾಸದಲ್ಲಿ ಹಲವು ವರ್ಷಗಳಿಂದಲೂ ಸೌಹಾರ್ದತೆಯಾಗಿ ಪುತ್ತರಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಇವರ ನಿವಾಸದಲ್ಲಿ ಸ್ಥಳೀಯ 50ಕ್ಕೂ ಅಧಿಕ ಮುಸ್ಲಿಂ ಬಾಂಧವರು ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದಲ್ಲಿ ಪಾಲ್ಗೊಂಡು ಕದಿರು ತೆಗೆದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಹಬ್ಬದ ಸಂಪ್ರದಾಯ ಮುಗಿದೊಡನೆ ಆಗಮಿಸಿದ ಎಲ್ಲರಿಗೂ ಸೌಹಾರ್ದತೆಯಿಂದ ಯಾವುದೇ ಭೇದಭಾವವಿಲ್ಲದೆ ಊಟೋಪಚಾರದ ಸಮಾರಾಧನೆ ನಡೆಯಿತು.ಎಲ್ಲರೂ ಇದನ್ನು ಪ್ರಸಾದಂತೆ ಸ್ವೀಕರಿಸಿ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.