RTO ಕಚೇರಿ; ರೂ.1,59,78,181 ರಾಜಸ್ವ ಸಂಗ್ರಹ
admincoorgdaily

ಮಡಿಕೇರಿ ಡಿ.04:-ನವೆಂಬರ್ -2025 ರ ಮಾಹೆಯಲ್ಲಿ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‍ಟಿಒ) ವತಿಯಿಂದ ಓಂಕಾರೇಶ್ವರಿ, ಅಪರ ಸಾರಿಗೆ ಆಯುಕ್ತರು (ಪ್ರವರ್ತನ) ಬೆಂಗಳೂರು ಮತ್ತು ವಸಂತ್ ಈಶ್ವರ್ ಚೌಹಾಣ್, ಜಂಟಿ ಸಾರಿಗೆ ಆಯುಕ್ತರು, ಮೈಸೂರು ವಿಭಾಗ, ಮೈಸೂರು, ಇವರ ಮಾರ್ಗದರ್ಶನ ಮತ್ತು ಸೂಚನೆ ಮೇರೆಗೆ ನವೆಂಬರ್ ಮಾಹೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನಿರಂತರ ತಪಾಸಣೆ ಕೈಗೊಳ್ಳಲಾಗಿದ್ದು, ಹೊರ ರಾಜ್ಯದಿಂದ ಬರುವ ಪ್ರವಾಸಿ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳನ್ನು ತಪಾಸಣೆ ನಡೆಸಿ, ಒಟ್ಟು 1,140 ವಾಹನಗಳಿಂದ, ಪಾರ್ಟ್ ಬಿ ತೆರಿಗೆ ರೂ.1,57,21,024, ಪಾರ್ಟ್ ಎ ತೆರಿಗೆ ರೂ. 29,357 ಮತ್ತು ದಂಡ ಮೊತ್ತ ರೂ.2,27,800 ಸಂಗ್ರಹಿಸಲಾಗಿದೆ.
ಒಟ್ಟು ರೂ.1,59,78,181 ರಾಜಸ್ವವನ್ನು ನವೆಂಬರ್ ಮಾಹೆಯಲ್ಲಿ ಸಂಗ್ರಹಿಸಲಾಗಿದ್ದು, ಗುರಿ ಮೀರಿದ ಸಾಧನೆಯಾಗಿರುತ್ತದೆ. ಕೊಡಗು ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ ನಡೆಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್ ಅವರು ತಿಳಿಸಿದ್ದಾರೆ. ನವೆಂಬರ್, 01 ರಿಂದ 30 ರವರೆಗೆ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮವು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಹಯೋಗದೊಂದಿಗೆ ಕೊಡಗು ಜಿಲ್ಲೆಯಾದ್ಯಂತ ನಡೆಯಿತು.
ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಇನ್ನಿತರ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಮತ್ತು ಚರ್ಚಾಸ್ಪರ್ಧೆಯನ್ನು ನಡೆಸಲಾಗಿತ್ತು. ಅಲ್ಲದೆ ಸರ್ಕಾರಿ ಜೂನಿಯರ್ ಕಾಲೇಜು ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲರಾದ ವಿಜಯ್ ಮತ್ತು ರಾಘವ್ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ವಾಯು ಮಾಲಿನ್ಯದ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕೆ.ಎಸ್.ಆರ್.ಟಿ.ಸಿ ಚಾಲಕ ಸಿಬ್ಬಂದಿಗಳಿಗೆ, ನಗರದ ಪ್ರಮುಖ ಪಟ್ಟಣದಲ್ಲಿ ಸಾರ್ವಜನಿಕರಿಗೆ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ತಿಳಿಸಲಾಯಿತು.
ಈ ಸಂಬಂಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮುಕ್ತಾಯ ಸಮಾರೋಪ ಸಮಾರಂಭ ನಡೆಯಿತು. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಎಸ್.ಟಿ. ಸತೀಶ್ ಅವರು ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದರೊಂದಿಗೆ, ಕಲಬೆರಕೆ ಇಂಧನ ಅಥವಾ ಕಲಬೆರಕೆ ಇಂಜಿನ್ ಆಯಿಲ್ ಬಳಸಬಾರದು, ವಾಹನಗಳಿಗೆ ಕಡ್ಡಾಯವಾಗಿ ವಾಯು ಮಾಲಿನ್ಯ ನಿಯಂತ್ರಣ ಧೃಡೀಕರಣ ಇಟ್ಟುಕೊಳ್ಳುವಂತೆಯೂ, ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟರು, ಕಾರ್ಯಕ್ರಮದಲ್ಲಿ ಕಚೇರಿ ಅಧೀಕ್ಷಕರುಗಳಾದ ಕೆ.ಎ.ಸಲೀಮಾ, ಎನ್.ಮೋಹನ ಕುಮಾರ್, ಮೋಟಾರು ವಾಹನ ನಿರೀಕ್ಷಕರಾದ ಮೋಹನ್ ಕುಮಾರ್, ಪ್ರದೀಪ್ ಅವರು ಇದ್ದರು. ಡಿ.ಕೆ.ರೀಟಾ ಅವರು ನಿರೂಪಿಸಿ, ವಂದಿಸಿದರು.