National News

ಅತ್ಯಾಚಾರ ಪ್ರಕರಣ | “ನಾನು ಸುಳ್ಳು ಹೇಳಿಕೆ ನೀಡಿದ್ದೆ; ಆತ ನನ್ನ ಬಾಯ್ ಫ್ರೆಂಡ್” ಎಂದ ಸಂತ್ರಸ್ತೆ!

admincoorgdaily

ಸಹರಾನ್‌ಪುರ (ಉತ್ತರ ಪ್ರದೇಶ): ಅಪ್ರಾಪ್ತೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ 22 ವರ್ಷದ ಯುವಕನಿಗೆ ಸ್ಥಳೀಯ ನ್ಯಾಯಾಲಯ ಕೇವಲ ಎರಡು ವಾರಗಳ ಹಿಂದೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಇದೀಗ ಈ ಪ್ರಕರಣದಲ್ಲಿ ಸಂತ್ರಸ್ತೆಯ ಹೊಸ ಹೇಳಿಕೆಯಿಂದ ನಾಟಕೀಯ ತಿರುವು ಬಂದಿದೆ.

ಇತ್ತೀಚೆಗೆ 18 ವರ್ಷ ಪೂರೈಸಿದ ಸಂತ್ರಸ್ತೆ, “ನ್ಯಾಯಾಲಯದಲ್ಲಿ ನಾನು ನೀಡಿದ ಹೇಳಿಕೆ ಸುಳ್ಳಾಗಿತ್ತು. ತಂದೆಯ ಒತ್ತಾಯದಿಂದ ಆ ಹೇಳಿಕೆ ನೀಡಬೇಕಾಯಿತು. ಆ ಯುವಕನೊಂದಿಗೆ ವಾಸಿಸಲು ನಾನು ಬಯಸುತ್ತೇನೆ. ಆತ ನನ್ನ ಬಾಯ್ ಫ್ರೆಂಡ್ ” ಎಂದು ಹೇಳಿದ್ದಾಳೆ ಎಂದು Indian Express ವರದಿ ಮಾಡಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಗುರುವಾರ ಪೊಲೀಸರು ವಿಶೇಷ ಸಭೆ ಕರೆದಿದ್ದರು. ಸಭೆಯಲ್ಲಿ ಸಂತ್ರಸ್ತೆ, ಆಕೆಯ ಕುಟುಂಬ ಹಾಗೂ ಆರೋಪಿಯ ಕುಟುಂಬದವರು ಹಾಜರಿದ್ದರು. ಆದರೆ ಎರಡೂ ಕುಟುಂಬಗಳು ಆಕೆಯನ್ನು ತಮ್ಮ ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದರು.

“ಬಾಲಕಿ ಮನೆಯಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾಳೆ ಎಂದು ಆಕೆಯ ಪೋಷಕರು ಹೇಳಿದ್ದಾರೆ. ಆರೋಪಿಯ ಪೋಷಕರು ಸಹ, ‘ಅವಳ ಕಾರಣದಿಂದ ನಮ್ಮ ಮಗ ಜೈಲಿಗೆ ಹೋಗಿದ್ದಾನೆ, ಆಕೆಯನ್ನು ನಾವು ಮನೆಗೆ ಸೇರಿಸಿಕೊಳ್ಳಲು ಸಿದ್ಧರಿಲ್ಲ’ ಎಂದು ಹೇಳಿದ್ದಾರೆ", ಎಂದು ಸಹರಾನ್‌ಪುರದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಭೆಯ ಬಳಿಕ ಅಧಿಕಾರಿಗಳು ಬಾಲಕಿಯನ್ನು ಮೀರತ್‌ನಲ್ಲಿರುವ ಮಹಿಳಾ ಆಶ್ರಯ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಸಂತ್ರಸ್ತೆಯೂ ಆಶ್ರಯ ಕೇಂದ್ರಕ್ಕೆ ತೆರಳಲು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಭೆಗೂ ಮುನ್ನ ಬಾಲಕಿ ಆರೋಪಿಯ ಮನೆಗೆ ತೆರಳಿ, ತನ್ನ ಸಹೋದರ ಮತ್ತು ಮಾವನೊಂದಿಗೆ ಅಲ್ಲಿಗೆ ಭೇಟಿ ನೀಡಿದ್ದಳು. ಒಂದು ವಿಡಿಯೋದಲ್ಲಿ ಆಕೆ “ನನ್ನ ತಂದೆ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ” ಎಂದು ಹೇಳಿದ್ದಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಸ್ಥಳೀಯರು ಮತ್ತು ಕೆಲವು ಹಿಂದೂ ಸಂಘಟನೆಗಳ ಸದಸ್ಯರು ಆರೋಪಿಯ ಮನೆಯ ಹೊರಗೆ ಪ್ರತಿಭಟನೆ ನಡೆಸಿದರು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಈ ಪ್ರಕರಣ 2022ರಲ್ಲಿ ದಾಖಲಾಗಿತ್ತು. ಆ ವೇಳೆ ಅಪ್ರಾಪ್ತ ಬಾಲಕಿ ನಾಪತ್ತೆಯಾಗುತ್ತಿದ್ದಂತೆಯೇ ಪೋಷಕರು ನೆರೆಮನೆಯ ಯುವಕನ ವಿರುದ್ಧ ಅಪಹರಣದ ಆರೋಪ ಮಾಡಿದ್ದರು. ತನಿಖೆ ವೇಳೆ ಯುವಕ ಬಂಧಿತನಾಗಿದ್ದನು. ಬಳಿಕ ಅವನ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಅತ್ಯಾಚಾರ ಆರೋಪ ಕೂಡ ದಾಖಲಿಸಲಾಗಿತ್ತು.