ಅಪ್ರಾಪ್ತೆಯ ಮೇಲೆ ಅತ್ಯಾಚಾರ: 10 ವರ್ಷ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

Jan 2, 2026 - 22:55
Jan 2, 2026 - 22:57
 0  1.1k
ಅಪ್ರಾಪ್ತೆಯ ಮೇಲೆ ಅತ್ಯಾಚಾರ: 10 ವರ್ಷ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ಹೈಕೋರ್ಟ್

ಬೆಂಗಳೂರು, ಜ. 2: ಅಪ್ರಾಪ್ತೆಗೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ್ದ ಅಪರಾಧಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ವಿಧಿಸಿದ್ದ 10 ವರ್ಷ ಜೈಲು ಶಿಕ್ಷೆಯಲ್ಲಿ ಯಾವುದೇ ರೀತಿಯ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್, ಆರೋಪಿಯ ಮೇಲ್ಮನವಿಯನ್ನು ವಜಾಗೊಳಿಸಿದೆ.

ಪ್ರಕರಣ ಸಂಬಂಧ ಆರೋಪಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಬಸವರಾಜು ಅವರಿದ್ದ ನ್ಯಾಯಪೀಠ, ತನಿಖಾಧಿಕಾರಿಗಳು ಸಲ್ಲಿಸಿರುವ ಸಾಕ್ಷ್ಯಾಧಾರಗಳು ಸಂತ್ರಸ್ತೆಯು ಅಪ್ರಾಪ್ತೆಯೇ ಎಂಬುದನ್ನು ಸ್ಪಷ್ಟವಾಗಿ ದೃಢಪಡಿಸುತ್ತವೆ ಎಂದು ಅಭಿಪ್ರಾಯಪಟ್ಟಿತು. ಸಂತ್ರಸ್ತೆ ನೀಡಿರುವ ಹೇಳಿಕೆಗಳು ವಿಶ್ವಾಸಾರ್ಹ ಹಾಗೂ ನಂಬಲಾರ್ಹವಾಗಿದ್ದು, ಆರೋಪಿಯು ಅತ್ಯಾಚಾರವೆಸಗಿರುವುದನ್ನು ಪ್ರಾಸಿಕ್ಯೂಷನ್ ಅನುಮಾನಕ್ಕೆ ಅವಕಾಶವಿಲ್ಲದಂತೆ ಸಾಬೀತುಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣಾ ನ್ಯಾಯಾಲಯವು ಪೋಕ್ಸೋ ಕಾಯ್ದೆಯಡಿ ವಿಧಿಸಿರುವ ಶಿಕ್ಷೆಯಲ್ಲಿ ಯಾವುದೇ ಕಾನೂನು ದೋಷಗಳಿಲ್ಲ. ಹೀಗಾಗಿ ಆ ಆದೇಶವನ್ನು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಡಿಎನ್ಎ ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂಬ ಆರೋಪಿಯ ವಾದವನ್ನೂ, ಸಂತ್ರಸ್ತೆ ಹಾಗೂ ಆರೋಪಿಯ ಕುಟುಂಬಗಳ ನಡುವಿನ ವೈಷಮ್ಯದ ಹಿನ್ನೆಲೆಯಲ್ಲಿ ಸುಳ್ಳು ಆರೋಪ ಮಾಡಲಾಗಿದೆ ಎಂಬ ವಾದವನ್ನೂ ನ್ಯಾಯಾಲಯ ತಳ್ಳಿ ಹಾಕಿದೆ. ಈ ಹಿನ್ನೆಲೆಯಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು ₹10,000 ದಂಡದ ಆದೇಶವನ್ನು ಯಥಾಸ್ಥಿತಿಯಲ್ಲಿ ಉಳಿಸಲಾಗಿದೆ.

ಪ್ರಕರಣದ ಹಿನ್ನೆಲೆ:

ಕೋಲಾರ ಜಿಲ್ಲೆಯ ಮೂಲದ ಸುಮಾರು 13 ವರ್ಷದ ಬಾಲಕಿ 8ನೇ ತರಗತಿ ಓದುತ್ತಿದ್ದಾಗ, ಶಾಲೆಗೆ ಹೋಗುವ ಸಂದರ್ಭಗಳಲ್ಲಿ ಆರೋಪಿಯು ಅವಳನ್ನು ಹಿಂಬಾಲಿಸಿ ಮಾತನಾಡಲು ಯತ್ನಿಸುತ್ತಿದ್ದ. ಒಮ್ಮೆ ಶಾಲೆಯಿಂದ ಮನೆಗೆ ಮರಳುವ ವೇಳೆ ಪ್ರೀತಿಯ ನೆಪದಲ್ಲಿ ಬೆದರಿಕೆ ಹಾಕಿ, ಸಹಕರಿಸದಿದ್ದರೆ ಬಾಲಕಿ ಹಾಗೂ ಅವಳ ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ ರಸ್ತೆ ಬದಿಯ ನೀಲಗಿರಿ ತೋಪಿಗೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಕೆಲ ದಿನಗಳ ಕಾಲ ಇದೇ ಕೃತ್ಯವನ್ನು ಮುಂದುವರೆಸಿದ್ದಾನೆ. ಈ ಘಟನೆಯಿಂದ ಬಾಲಕಿ ಗರ್ಭಿಣಿಯಾಗಿದ್ದು, ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಪರೀಕ್ಷೆಗೆ ಕರೆದೊಯ್ದಾಗ ಏಳು ತಿಂಗಳ ಗರ್ಭವಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ನಂತರ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ಡಿಎನ್ಎ ಪರೀಕ್ಷೆ ಸೇರಿದಂತೆ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದರು.

ಆರೋಪಪಟ್ಟಿ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ವಿಚಾರಣಾ ನ್ಯಾಯಾಲಯ, ಪೋಕ್ಸೋ ಕಾಯ್ದೆಯಡಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ₹10,000 ದಂಡ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದನು.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 0