ಮದುವೆ ಕುರಿತು ಸುದ್ದಿಗೋಷ್ಠಿ ನಡೆಸಲಿರುವ ರಶ್ಮಿಕಾ–ವಿಜಯ್ ದೇವರಕೊಂಡ
ಹೈದರಾಬಾದ್, ನ.11: ದಕ್ಷಿಣದ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ಗಾಸಿಪ್ ಗಳ ನಡುವೆ ಮತ್ತೆ ಒಂದಾಗಿ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಅಭಿನಯದ ‘ದಿ ಗರ್ಲ್ಫ್ರೆಂಡ್’ ಚಿತ್ರ ಯಶಸ್ಸಿನ ಹಿನ್ನಲೆಯಲ್ಲಿ ಚಿತ್ರತಂಡ ಬುಧವಾರ (ನ.12) ಹೈದರಾಬಾದ್ ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದು, ವಿಜಯ್ ದೇವರಕೊಂಡ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ ಎಂದು ಚಿತ್ರಮೂಲಗಳು ತಿಳಿಸಿವೆ.
ಇತ್ತೀಚೆಗೆ ಇವರಿಬ್ಬರ ನಿಶ್ಚಿತಾರ್ಥದ ಬಗ್ಗೆ ಹಬ್ಬಿದ ವದಂತಿಯ ನಂತರ ಮಾಧ್ಯಮಗಳ ಮುಂದೆ ಅವರು ಇದೇ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿರುವುದರಿಂದ ಸುದ್ದಿಗೋಷ್ಠಿಯತ್ತ ಭಾರೀ ಕುತೂಹಲ ಮೂಡಿದೆ. ಈ ವೇಳೆ ಎಂಗೇಜ್ಮೆಂಟ್ ಕುರಿತ ಪ್ರಶ್ನೆಗಳು ಎದುರಾಗುವುದು ಖಚಿತವಾಗಿದ್ದು, ಅವರ ಪ್ರತಿಕ್ರಿಯೆಯತ್ತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮೂಲಗಳ ಪ್ರಕಾರ, ಅಕ್ಟೋಬರ್ 3ರಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್‌ನಲ್ಲಿ ಖಾಸಗಿ ವಾತಾವರಣದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರು ಹಾಗೂ ಆಪ್ತರು ಮಾತ್ರ ಈ ಸಮಾರಂಭದಲ್ಲಿ ಹಾಜರಿದ್ದರು. ನಿಶ್ಚಿತಾರ್ಥದ ಯಾವುದೇ ಚಿತ್ರಗಳು ಹೊರಬಂದಿಲ್ಲ. ಆದರೆ, ಇವರ ವಿವಾಹ 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ನವೆಂಬರ್ 7ರಂದು ಬಿಡುಗಡೆಯಾದ ‘ದಿ ಗರ್ಲ್ಫ್ರೆಂಡ್’ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದು, ಚಿತ್ರತಂಡವು ಪ್ರಚಾರಾರ್ಥ ಸುದ್ದಿಗೋಷ್ಠಿ ಆಯೋಜಿಸಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಆಪ್ತತೆ ‘ಗೀತಾ ಗೋವಿಂದಂ’ ಚಿತ್ರದಿಂದಲೇ ಪ್ರಾರಂಭವಾಗಿದ್ದು, ‘ಡಿಯರ್ ಕಾಮ್ರೇಡ್’ ಬಳಿಕ ಇವರಿಬ್ಬರ ಹೆಸರಿನಲ್ಲಿ ಗಾಸಿಪ್ ಹರಿದಾಡಿತ್ತು. ಅವರು ತಮ್ಮ ಸಂಬಂಧವನ್ನು ಯಾವತ್ತೂ ಒಪ್ಪಿಕೊಂಡಿದ್ದೂ ಇಲ್ಲ, ತಿರಸ್ಕರಿಸಿಯೂ ಇಲ್ಲ.
ಇದಕ್ಕೂ ಮೊದಲು ರಶ್ಮಿಕಾ ಮಂದಣ್ಣ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಆ ಸಂಬಂಧ ಮುರಿದುಬಿತ್ತು. ನಂತರ ವಿಜಯ್ ದೇವರಕೊಂಡ ಅವರೊಂದಿಗೆ ಆಪ್ತತೆ ಬೆಳೆಸಿಕೊಂಡ ರಶ್ಮಿಕಾ ಇದೀಗ ಮದುವೆಯಾಗಲಿದ್ದಾರೆ ಎನ್ನಲಾಗಿದೆ.