ಉದಯಪುರದಲ್ಲಿ ಫೆಬ್ರವರಿಯಲ್ಲಿ ರಶ್ಮಿಕಾ–ವಿಜಯ್ ದೇವರಕೊಂಡ ಮದುವೆ?
ಹೈದರಾಬಾದ್: ದಕ್ಷಿಣ ಭಾರತದ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಬಹು ಚರ್ಚಿತ ಪ್ರೇಮ ಕಥೆ ಇದೀಗ ಮದುವೆಯ ಹಂತ ತಲುಪಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಇಬ್ಬರೂ 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ಅದ್ದೂರಿಯಾಗಿ ವಿವಾಹವಾಗಲಿದ್ದಾರೆ. ಈ ಮದುವೆಗೆ ಆತ್ಮೀಯರಿಗೆ ಮಾತ್ರವೇ ಆಹ್ವಾನ ನೀಡಲಾಗುವುದು ಹಾಗೂ ಖಾಸಗಿ ವಾತಾವರಣದಲ್ಲಿ ಆಯೋಜಿಸಲಾಗುವುದು ಎಂದು ತಿಳಿದುಬಂದಿದೆ.
ಕಳೆದ ತಿಂಗಳು ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಅವರ ನಿವಾಸದಲ್ಲಿ ಇಬ್ಬರೂ ಅಕ್ಟೋಬರ್ 3, 2025ರಂದು ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಹಾಗೂ ಅತಿ ಆಪ್ತ ಸ್ನೇಹಿತರು ಮಾತ್ರ ಹಾಜರಿದ್ದರು ಎಂದು ಹೇಳಲಾಗಿದೆ.
ಇಬ್ಬರೂ ಈ ಕುರಿತು ಅಧಿಕೃತವಾಗಿ ಪ್ರತಿಕ್ರಿಯಿಸದಿದ್ದರೂ, ಮೂಲಗಳು ಳು ಹಾಗೂ ರಶ್ಮಿಕಾ ಅವರ ಇತ್ತೀಚಿನ ಹೇಳಿಕೆಗಳು ಈ ಸುದ್ದಿಗೆ ಮತ್ತಷ್ಟು ಬಲ ತುಂಬಿವೆ. ಇತ್ತೀಚೆಗೆ ಬಾಲಿವುಡ್ ಚಿತ್ರ ‘ತಮ್ಮಾ’ ಪ್ರಚಾರ ಕಾರ್ಯಕ್ರಮದಲ್ಲಿ ನಿಶ್ಚಿತಾರ್ಥದ ಬಗ್ಗೆ ಕೇಳಿದಾಗ, ರಶ್ಮಿಕಾ “ಎಲ್ಲರಿಗೂ ಅದರ ಬಗ್ಗೆ ಗೊತ್ತಿದೆ” ಎಂದು ನಗುಮುಖದಿಂದ ಪ್ರತಿಕ್ರಿಯಿಸಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವಿಜಯ್ ದೇವರಕೊಂಡ ಅವರ ಕುಟುಂಬದ ಆಪ್ತ ಮೂಲವೊಂದು, “ಈ ಜೋಡಿ ಮುಂದಿನ ವರ್ಷ ಮದುವೆಗೆ ಸಿದ್ಧತೆ ಆರಂಭಿಸಿದೆ. ಫೆಬ್ರವರಿ ತಿಂಗಳಲ್ಲಿ ನಡೆಯುವ ಸಮಾರಂಭದ ಪೂರ್ವಭಾವಿ ಕೆಲಸಗಳು ಈಗಾಗಲೇ ಆರಂಭವಾಗಿವೆ” ಎಂದು ತಿಳಿಸಿದೆ. ಮದುವೆಯು ದಕ್ಷಿಣ ಭಾರತೀಯ ಹಾಗೂ ರಾಜಸ್ಥಾನಿ ಸಂಪ್ರದಾಯಗಳ ಸಂಯೋಜನೆಯಲ್ಲಿರಲಿದೆ ಎಂದು ತಿಳಿದು ಬಂದಿದೆ.
ಅಕ್ಟೋಬರ್‌ನಲ್ಲಿ ರಶ್ಮಿಕಾ ತಮ್ಮ ಸಾಕು ನಾಯಿ ಔರಾ ಜೊತೆ ವೀಡಿಯೊದಲ್ಲಿ ವಜ್ರದ ಉಂಗುರ ಧರಿಸಿದ್ದನ್ನು ಅಭಿಮಾನಿಗಳು ಗಮನಿಸಿದ್ದರು. ಅದೇ ಸಮಯದಲ್ಲಿ ವಿಜಯ್ ದೇವರಕೊಂಡ ಕೂಡಾ ಶ್ರೀ ಸತ್ಯ ಸಾಯಿ ಬಾಬಾ ಮಹಾ ಸಮಾಧಿಗೆ ಭೇಟಿ ನೀಡಿದಾಗ ಅದೇ ರೀತಿಯ ಉಂಗುರ ಧರಿಸಿರುವುದು ಗಮನಸೆಳೆಯಿತು.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮೊದಲ ಬಾರಿಗೆ 2018ರ ‘ಗೀತ ಗೋವಿಂದಂ’ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡು, ನಂತರ 2019ರ ‘ಡಿಯರ್ ಕಾಮ್ರೇಡ್’ ಮೂಲಕ ಮತ್ತೊಮ್ಮೆ ತೆರೆ ಹಂಚಿಕೊಂಡಿದ್ದರು. ಅವರ ತೆರೆಯ ಮೇಲಿನ ಸಮೀಕರಣ ನಿಜ ಜೀವನದ ಪ್ರೇಮದ ಕುರಿತ ಊಹಾಪೋಹಗಳಿಗೆ ಕಾರಣವಾಗಿತ್ತು.
ಈಗ ಇಬ್ಬರೂ ತಮ್ಮ ತಮ್ಮ ಚಿತ್ರರಂಗದ ಕೆಲಸಗಳಲ್ಲಿ ನಿರತವಾಗಿದ್ದಾರೆ. ರಶ್ಮಿಕಾ ರಾಹುಲ್ ಸದಾಶಿವನ್ ನಿರ್ದೇಶನದ ತೆಲುಗು ಚಿತ್ರ ‘ದಿ ಗರ್ಲ್‌ಫ್ರೆಂಡ್’ನಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಕೀರ್ತಿ ಸುರೇಶ್ ಜೊತೆ ನಟಿಸಿರುವ ಹೊಸ ಚಿತ್ರ ‘SVC59’ ರವಿ ಕಿರಣ್ ಕೋಲಾ ನಿರ್ದೇಶನದಲ್ಲಿ ನಿರ್ಮಾಣ ಹಂತದಲ್ಲಿದೆ.