State News

ವ್ಹೀಲ್‌ಚೇರ್‌ ನಲ್ಲಿದ್ದ ಪತ್ನಿಯ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಿಎಂಟಿಸಿಯ ನಿವೃತ್ತ ಚಾಲಕ

admincoorgdaily

Photo credit: TV09

ಬೆಂಗಳೂರು: ನಗರದ ದಕ್ಷಿಣ ವಿಭಾಗದ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಚಿಕ್ಕಗೌಡನ ಪಾಳ್ಯದಲ್ಲಿ ಮಂಗಳವಾರ ರಾತ್ರಿ ಸ್ಟ್ರೋಕ್‌ನಿಂದ ವ್ಹೀಲ್‌ಚೇರ್‌ ನಲ್ಲೇ ಜೀವನ ಸಾಗಿಸುತ್ತಿದ್ದ ಪತ್ನಿಯನ್ನು ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ವೆಂಕಟೇಶನ್ (65) ಹಾಗೂ ಅವರ ಪತ್ನಿ ಬೇಬಿ (65) ಎಂದು ಗುರುತಿಸಲಾಗಿದೆ. ಬಿಎಂಟಿಸಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವೆಂಕಟೇಶನ್, ಅನಾರೋಗ್ಯ ಪೀಡಿತ ಪತ್ನಿಯನ್ನು ಹಲವು ತಿಂಗಳಿಂದ ನೋಡಿಕೊಳ್ಳುತ್ತಿದ್ದರು. ಸ್ಟ್ರೋಕ್‌ ನಿಂದ ಬಳಲುತ್ತಿದ್ದ ಬೇಬಿ ಸಂಪೂರ್ಣವಾಗಿ ವ್ಹೀಲ್‌ ಚೇರ್‌ ನಲ್ಲೇ ಅವಲಂಬಿತರಾಗಿದ್ದರೆಂದು ಕುಟುಂಬದವರು ತಿಳಿಸಿದ್ದಾರೆ.

ದಂಪತಿಗಳ ನಡುವೆ ಆಗಾಗ ಸಣ್ಣಪುಟ್ಟ ವಿಚಾರಕ್ಕೂ ಜಗಳ ಸಂಭವಿಸುತ್ತಿತ್ತಂತೆ. ಮಂಗಳವಾರ ಸಂಜೆ ಜಗಳ ತೀವ್ರಗೊಂಡಿದ್ದು, ಕೋಪೋದ್ರಿಕ್ತರಾದ ವೆಂಕಟೇಶನ್ ಬಟ್ಟೆ ಒಣಗಿಸುವ ತಂತಿಯಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆಮಾಡಿದ್ದಾರೆ. ಬಳಿಕ ಅದೇ ತಂತಿಯನ್ನು ಬಳಸಿಕೊಂಡು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ ಮನೆಗೆ ಬಂದ ಸೊಸೆ, ದಂಪತಿಯ ಮೃತದೇಹಗಳನ್ನು ಕಂಡು ಬೆಚ್ಚಿಬಿದ್ದು ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸುಬ್ರಮಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.