ಮರಗೋಡಿನಲ್ಲಿ ದುರಸ್ಥಿ ಕಾಣದ ರಸ್ತೆ: ಬೇಸೆತ್ತ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ, ಅಧಿಕಾರಿಗೆ ತರಾಟೆ

Dec 26, 2025 - 16:38
 0  439
ಮರಗೋಡಿನಲ್ಲಿ ದುರಸ್ಥಿ ಕಾಣದ ರಸ್ತೆ: ಬೇಸೆತ್ತ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ, ಅಧಿಕಾರಿಗೆ ತರಾಟೆ

ಮರಗೋಡು; ಡಿ.26, ಮರಗೋಡು-ಕತ್ತಲೆಕಾಡು ರಸ್ತೆ ದುರಸ್ಥಿ ಕಾಣದೆ 20 ವರ್ಷ ಮೇಲ್ಪಟ್ಟ ಹಿನ್ನೆಲೆಯಲ್ಲಿ ಮರಗೋಡು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮರಗೋಡಿನಿಂದ ಹುಲಿತಾಳದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಯೋಗ್ಯತೆಯನ್ನೇ ಕಳೆದುಕೊಂಡಿದೆ. ಹಾಗಾಗಿ ಬಸ್ ಗಳು ಹುಲಿತಾಳದಿಂದಲೇ ಮಡಿಕೇರಿಗೆ ಹಿಂದಿರುಗುತ್ತಿದ್ದು, ಆಟೋ ಚಾಲಕರು ಕೂಡ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ದ್ವಿಚಕ್ರ ಸವಾರರಂತೂ ಜೀವ ಪಣಕ್ಕಿಟ್ಟು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಪ್ರತಿನಿತ್ಯ ಹಲವು ಸವಾರರು ಉರುಳಿ ಬಿದ್ದು ಗಾಯಾಳುಗಳಾಗುತ್ತಿದ್ದರು. ಇನ್ನು ಕಾರು ಜೀಪು ಹೊಂದಿದ ಸ್ಥಳೀಯರು ಈ ರಸ್ತೆಯಲ್ಲಿ ಸಂಚರಿಸುವಾಗ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಇಯೇ ಸಂಚರಿಸುವಂತಾಗಿತ್ತು.

ಭರ್ತಿ 15 ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರೀಕರಣವಾಗಿದ್ದು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಕನಿಷ್ಟ ತೇಪೆ ಕಾರ್ಯವನ್ನೂ ಕೂಡ ಮಾಡದೆ ನಿರ್ಲಕ್ಷ್ಯ ಮಾಡಲಾಗಿತ್ತು. ರಸ್ತೆ ದುರಸ್ಥಿಪಡಿಸುವಂತೆ ಈ ಮೊದಲು ಸ್ಥಳೀಯ ಗ್ರಾಮಸ್ಥರು, ವಾಹನ ಚಾಲಕರು ಬಹಳಷ್ಟು ಬಾರಿ ಜಿಲ್ಲಾಡಳಿತ, ಸ್ತಳೀಯ ಶಾಸಕರಿಗೆ ಮನವಿ ಮಾಡಿದ್ದರೂ ಕೂಡ ಪ್ರಯೋಜನವಾಗಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತ ಸ್ಥಳೀಯ ಗ್ರಾಮಸ್ಥರು ಇಂದು ಮರಗೋಡು ಗ್ರಾಮ ಕೇಂದ್ರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಇದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.

ಮರಗೋಡು ಆಟೋ ಚಾಲಕರ ಸಂಘ ಪ್ರಮುಖವಾಗಿ ಈ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನೆ ಸಂದರ್ಭ ಮಾತನಾಡಿದ ಭಗಂಡೇಶ್ವರ ಬಸ್ ಚಾಲಕ ಮಧುಮೋಹನ್, ಹದಗೆಟ್ಟ ರಸ್ತೆಯಲ್ಲಿ ಖಾಸಗಿ ಬಸ್ ಗಗಳ ಸಂಚಾರದ ದುರವಸ್ಥೆಯನ್ನು ತೆರೆದಿಟ್ಟರು. ರಸ್ತೆ ಕಾಮಗಾರಿಗೆ ಬರೇ ಭೂಮಿ ಪೂಜೆ ಮಾಡುತ್ತಿದ್ದಾರೆಯೇ ಹೊರತು ರಸ್ತೆ ದುರಸ್ಥಿ ಮಾಡುತ್ತಿಲ್ಲ, ಖಾಸಗಿ ಬಸ್ ನವರು ಲಾಭ-ಅಸಲು ಬದಿಗಿಟ್ಟು ಸಾರ್ವಜನಿಕರಿಗೆ ಸೇವೆ ನೀಡಬೇಕೆಂಬ ಒಂದೇ ಉದ್ದೇಶದಿಂದ ಲಕ್ಷಾಂತರ ರೂ ನಷ್ಟ ಮಾಡಿಕೊಂಡು ಬಸ್ ಓಡಿಸುತ್ತಿರುವುದಾಗಿ ಹೇಳಿದರು. 

ಪ್ರತಿಭಟನೆಯ ಸಂದರ್ಭ ಮಾತನಾಡಿದ ಆಟೋ ಚಾಲಕರ ಸಂಘದ ಅಧ್ಯಕ್ಷ ನಂದಕುಮಾರ್, ಮಡಿಕೇರಿ ಹುಲಿತಾಳ ರಸ್ತೆಯಲ್ಲಿ ಆಟೋ ಓಡಿಸುವುದೆಂದರೆ ಜೀವ ಬಾಯಿಗೆ ಬಂದಂತೆ ಆಗುತ್ತದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನೇರ ಗ್ಯಾರೇಜಿಗೆ ತೆರಳುವಂತಾಗಿದೆ. ಆಂಬ್ಯುಲೆನ್ಸ್ ಕೂಡ ಈ ರಸ್ತೆಯಲ್ಲಿ ಬರುವುದಿಲ್ಲ. ಸ್ಥಳೀಯ ನಾಗರೀಕರಾಗಿ ನಾವೇನು ಅನ್ಯಾಯ ಮಾಡಿದ್ದೇವೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು. ಇದೇ ಸಂದರ್ಭ ಮಾತನಾಡಿದ ಆಟೋಚಾಕರ ಸಂಘದ ಕಾರ್ಯದರ್ಶಿ ಇಟ್ಟಣಿಕೆ ನವನೀತ್, ಈ ರಸ್ತೆಗೆ ಈಗಾಗಲೆ ಎರಡು ಬಾರಿ ಗುದ್ದಲಿ ಪೂಜೆ ಮಾಡಿದ್ದಾರೆ. ಆದರೆ ಕಾಮಗಾರಿ ಆರಂಭವಾಗಿಲ್ಲ. ಅದೂ ಅಲ್ಲದೆ, ಈ ರಸ್ತೆಯಲ್ಲಿ ಎಷ್ಟು ಕಿಲೋ ಮೀಟರ್ ರಸ್ತೆ ಕಾಮಗಾರಿ ಮಾಡಲಾಗುತ್ತದೆ ಎಂಬುದೂ ಸ್ಪಷ್ಟವಿಲ್ಲ. ಗ್ರಾಮಸ್ಥರನ್ನು ಕತ್ತಲಲ್ಲಿ ಇಟ್ಟು ಅಧಿಕಾರಿಗಳು ಜನಪ್ರತಿನಿಧಿಗಳು ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು. 

ಪ್ರತಿಭಟನೆ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ಡಿವೈಎಸ್ಪಿ ಸೂರಜ್, ಮಡಿಕೇರಿ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಎಸ್ಐ ತಮ್ಮಯ್ಯ, ಪ್ರತಿಭಟನಾಕಾರರಿಗೆ ರಸ್ತೆ ತಡೆ ನಡೆಸದೆ ಪ್ರತಿಭಟನೆ ನಡೆಸುವಂತೆ ಸೂಚನೆ ನೀಡಿದರು. ಇದಕ್ಕೆ ಸಮ್ಮತಿಸಿದ ಪ್ರತಿಭಟನಾಕಾರರು ಲೋಕೋಪಯೋಗಿ ಅಧಿಕಾರಿಗಳು 11 ಗಂಟೆಯ ಒಳಗೆ ಸ್ಥಳಕ್ಕೆ ಆಗಮಿಸುವಂತೆ ಷರತ್ತು ವಿಧಿಸಿ ರಸ್ತೆ ತಡೆ ಹಿಂಪಡೆದು ಪ್ರತಿಭಟನೆ ಮುಂದುವರಿಸಿದರು. 

ಲೋಕೋಪಯೋಗಿ ಜೆಇ ಗೆ ತರಾಟೆ.

11 ಗಂಟೆಯ ವೇಳೆಗೆ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಕಿರಿಯ ಅಭಿಯಂತರ ಗಿರೀಶ್ ರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ರಸ್ತೆ ಕಾಮಗಾರಿಗೆ ಟೆಂಡರ್ ಆಗಿ ಅನುದಾನ ಬಿಡುಗಡೆಯಾದರೂ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿ ಗಿರೀಶ್ ಮಳೆ ಹಿನ್ನೆಲೆ ಕಾಮಗಾರಿ ವಿಳಂಭವಾಗಿದ್ದು ಸಧ್ಯ 900 ಮೀಟರ್ ರಸ್ತೆ ಕಾಮಗಾರಿಯನ್ನ ಜನವರಿ 10 ರ ಒಳಗೆ ಸಂಪೂರ್ಣಗೊಳಿಸಿಕೊಡುವುದಾಗಿ ಭರವಸೆ ನೀಡಿದರು. ಇನ್ನೂ ಐದು ಕಿಲೋ ಮೀಟರ್ ರಸ್ತೆಯನ್ನು ಆದಷ್ಟು ಶೀಘ್ರ ಟೆಂಡರ್ ಕರೆದು ಏಪ್ರಿಲ್ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳಸಿವುದಾಗಿ ಭರವಸೆ ನಿಡಿದರು. ಸ್ಥಳೀಯ ಗ್ರಾಮಸ್ಥರು ಇಷ್ಟೆಲ್ಲಾ ಬವಣೆ ಪಡುತ್ತಿದ್ದರೂ ಶಾಸಕ ಡಾ ಮಂಥರ್ ಗೌಡ ಸ್ಥಳಕ್ಕೆ ಯಾಕೆ ಭೇಟಿ ಕೊಡುವುದಿಲ್ಲ ಎಂದು ಸಾರ್ವಜನಿಕರು ಖಾರವಾಗಿ ಪ್ರಶ್ನಿಸಿದರು.

ಪ್ರತಿಭಟನೆ ಬೆನ್ನಲ್ಲೇ ರಸ್ತೆ ಕಾಮಗಾರಿ ಶುರು.

ಅಚ್ಚರಿಯ ವಿಷಯ ಏನೆಂದರೆ ಇಂದು ಮರಗೋಡಿನಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುತ್ತದೆ ಎಂಬ ಸುದ್ದಿ ಪ್ರಚಾರವಾಗುತ್ತಲೇ ಎಚ್ಚೆತ್ತ ಗುತ್ತಿಗೆದಾರರು ನಿನ್ನೆ ರಾತ್ರೋ ರಾತ್ರಿ ಜೆಸಿಬಿ ತಂದು ಹುಲಿತಾಳದ ಬಳಿ ರಸ್ತೆ ಅಗೆದು ಕಾಮಗಾರಿಗೆ ಚಾಲನೆ ನಿಡಿದ್ದಾರೆ. ಇದೇ ಪ್ರಜ್ಞೆ ಕೆಲವು ತಿಂಗಳ ಹಿಂದೆಯೇ ತೋರಿದ್ದಲ್ಲಿ ಇಂದು ರಸ್ತೆ ಸಂಚಾರಕ್ಕೆ ಯೋಗ್ಯವಾಗಿರುತ್ತಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. 

ಸಧ್ಯ ಪ್ರತಿಭಟನೆ ಬೆನ್ನಲ್ಲೇ ಅಲ್ಲಲ್ಲಿ ಕಾಮಗಾರಿಯೂ ಆರಂಭಗೊಂಡಿದೆ. ಆದರೆ ಕಟ್ಟೆಮಾಡುವಿನಿಂದ ಮರಗೋಡು-ಹುಲಿತಾಳದವರೆಗೆ ಸಂಪೂರ್ಣ ಹದಗೆಟ್ಟಿರುವ ಸುಮಾರು 8 ಕಿಲೋ ಮೀಟರ್ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಮರಗೋಡು ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಪ್ರದೀಪ್, ಮರಗೋದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿತ್ರಾ, ಸದಸ್ಯರುಗಳಾದ, ಬಳಪದ ಮೋಹನ್, ಪರಿಚನ ಶರತ್, ಇಟ್ಟಣಿಕೆ ನಾಗೇಶ, ಬಿಜೆಪಿ ಮುಖಡ ಕಾಂಗಿರ ಅಶ್ವಿನ್, ಗ್ರಾಮಸ್ಥರಾದ ಪೂಳಕಂಡ ಸಂದೀಪ್, ವಿವೇಕಾನಂದ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಹುಲಿತಾಳ, ಕಟ್ಟೆಮಾಡು, ಹೊಸ್ಕೇರಿ, ಅರೆಕಾಡು ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರತಿಭಟನೆ ಸಂದರ್ಭ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ವ್ಯಾಪಾರಸ್ಥರು ಬೆಂಬಲ ನೀಡಿದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0