ಬೈಕ್‌ ಟ್ಯಾಕ್ಸಿ ಚಾಲಕನ ಖಾತೆಯಲ್ಲಿ 331 ಕೋಟಿ ರೂ. ಪತ್ತೆ; ಈಡಿ ಶಾಕ್!

Nov 30, 2025 - 09:54
Nov 30, 2025 - 10:13
 0  1.5k
ಬೈಕ್‌ ಟ್ಯಾಕ್ಸಿ ಚಾಲಕನ ಖಾತೆಯಲ್ಲಿ 331 ಕೋಟಿ ರೂ. ಪತ್ತೆ; ಈಡಿ ಶಾಕ್!
Photo credit:Public tv

ನವದೆಹಲಿ: ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಹಣಕಾಸು ಅಕ್ರಮ ಜಾಲದ ತನಿಖೆಯ ವೇಳೆ ದೆಹಲಿಯ ಬೈಕ್‌ ಟ್ಯಾಕ್ಸಿ ಚಾಲಕನ ಬ್ಯಾಂಕ್‌ ಖಾತೆಯಲ್ಲಿ 331 ಕೋಟಿ ರೂ.ಗಳ ವ್ಯವಹಾರ ನಡೆದಿರುವುದು ಜಾರಿ ನಿರ್ದೇಶನಾಲಯಕ್ಕೆ (ಈಡಿ) ಪತ್ತೆಹಚ್ಚಿದೆ.

 ಆಗಸ್ಟ್‌ 2024ರಿಂದ ಏಪ್ರಿಲ್‌ 2025ರವರೆಗಿನ ಎಂಟು ತಿಂಗಳ ಅವಧಿಯಲ್ಲಿ ನಡೆದ ಈ ಅನಿಯಮಿತ ಹಣಹರಿವು ಅಧಿಕಾರಿಗಳಲ್ಲಿ ಗಂಭೀರ ಶಂಕೆ ಮೂಡಿಸಿದೆ.

ಪ್ರತಿ ದಿನ ಬೈಕ್‌ ಚಲಾಯಿಸಿ ಜೀವನ ಸಾಗಿಸುವ ಈ ವ್ಯಕ್ತಿಯ ಖಾತೆಯಲ್ಲಿ ಕಂಡುಬಂದ ಅಸಾಮಾನ್ಯ ಹಣದ ಹರಿವು ಕಂಡು, ಇದನ್ನು ‘ಮ್ಯೂಲ್‌ ಖಾತೆ’ಯಾಗಿ ಬಳಸಲಾಗಿದೆ ಎಂಬ ಈಡಿ ಶಂಕೆ ಬಲಪಡಿಸಿದೆ. ಸಂಬಂಧಿತ ವಿಳಾಸದ ಮೇಲೆ ನಡೆಸಿದ ದಾಳಿಯಲ್ಲಿ, ಖಾತೆದಾರ ತನ್ನ ಹೆಸರಿನಲ್ಲಿ ನಡೆದ ಬೃಹತ್‌ ಠೇವಣಿಗಳ ಬಗ್ಗೆ ತಿಳಿವಳಿಕೆ ಇಲ್ಲವೆಂದು ಹೇಳಿಕೆ ನೀಡಿದ್ದಾನೆ.

ಈ ಖಾತೆಯಿಂದ ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಐಷಾರಾಮಿ ಮದುವೆಗೆ 1 ಕೋಟಿ ರೂ.ಗೂ ಹೆಚ್ಚು ಹಣ ಪಾವತಿಸಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಮದುವೆಯು ಗುಜರಾತ್‌ ನ ಯುವ ರಾಜಕಾರಣಿಗೆ ಸಂಬಂಧಿಸಿದೆ ಎಂಬ ಶಂಕೆಯನ್ನು ಈಡಿ ವ್ಯಕ್ತಪಡಿಸಿದ್ದು, ಅವರನ್ನು ಶೀಘ್ರದಲ್ಲೇ ವಿಚಾರಣೆಗೆ ಹಾಜರುಪಡಿಸುವ ಸಾಧ್ಯತೆ ಇದೆ.

ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ವೇದಿಕೆಗಳಲ್ಲಿ 1xBet ಪ್ರಮುಖ ಮೂಲವಾಗಿದ್ದು, ಅನೇಕ ಗೊತ್ತಿಲ್ಲದ ಖಾತೆಗಳಿಂದ ಬೈಕ್‌ ಚಾಲಕನ ಖಾತೆಗೆ ಹಣ ಜಮಾ ಆಗಿ, ನಂತರ ತಕ್ಷಣವೇ ಇತರ ಅನುಮಾನಾಸ್ಪದ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪತ್ತೆಯಾಗಿದೆ. ಹಣದ ಮೂಲ ಮತ್ತು ಅಂತಿಮ ತಲುಪುವ ಖಾತೆಗಳಿಗೆ ಕಳುಹಿಸುವ ಉದ್ದೇಶದೊಂದಿಗೆ ರೂಪಿಸಲಾದ ಸರಪಳಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಜಿಟಲ್‌ ಬೆಟ್ಟಿಂಗ್‌ ವ್ಯವಸ್ಥೆಯಲ್ಲಿನ ಹಣದ ಚಲನವಲನವನ್ನು ಮ್ಯಾಪ್‌ ಮಾಡುವ ಕಾರ್ಯ ಮುಂದುವರಿದಿದೆ.

1xBet ಹಗರಣಕ್ಕೆ ಸಂಬಂಧಿಸಿದಂತೆ ಕ್ರೀಡಾ ಮತ್ತು ಮನರಂಜನಾ ವಲಯದಲ್ಲೂ ತನಿಖೆ ವಿಸ್ತರಿಸಿದೆ. ಮಾಜಿ ಕ್ರಿಕೆಟಿಗರಾದ ಶಿಖರ್‌ ಧವನ್‌ ಮತ್ತು ಸುರೇಶ್‌ ರೈನಾ ಇವರಿಗೆ ಸೇರಿದ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಈಡಿ ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಬೆಟ್ಟಿಂಗ್‌ ವೇದಿಕೆಗಳ ಪ್ರಚಾರ ಮತ್ತು ಸಹಭಾಗಿತ್ವ ಸಂಬಂಧಿಸಿದ ವಿಷಯಗಳಲ್ಲಿ ಹಲವು ಕ್ರೀಡಾಪಟುಗಳು ಹಾಗೂ ಸಿನಿತಾರೆಯರ ಹೇಳಿಕೆ ಪಡೆಯಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 2
Angry Angry 0
Sad Sad 0
Wow Wow 1