ಎಸ್‌ಐಆರ್ ಪ್ರಕ್ರಿಯೆ; ಶೇ.86 ರಷ್ಟು ಡಿಜಿಟಲೀಕರಣ:ಜಿಲ್ಲಾಧಿಕಾರಿ ಸೋಮಶೇಖರ್

Jul 30, 2026 - 17:12
 0  109
ಎಸ್‌ಐಆರ್ ಪ್ರಕ್ರಿಯೆ; ಶೇ.86 ರಷ್ಟು ಡಿಜಿಟಲೀಕರಣ:ಜಿಲ್ಲಾಧಿಕಾರಿ ಸೋಮಶೇಖರ್

ಮಡಿಕೇರಿ ಜು.30:-ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್) ಡಿಜಿಟಲೀಕರಣವು ಜಿಲ್ಲೆಯಲ್ಲಿ ಶೇ.86 ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಂಬಂಧ ಶಾಶ್ವತವಾಗಿ ಸ್ಥಳಾಂತರ, ಎರಡು ಕಡೆ ಹೆಸರು ಹೊಂದಿರುವ ಹಾಗೂ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೆ(ಎಎಸ್‌ಡಿಡಿಒ) ಇರುವ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ಹಸ್ತಾಂತರಿಸಿ ಜಿಲ್ಲಾಧಿಕಾರಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 4,68,657 ಮತದಾರರಲ್ಲಿ 4,68,657 ಮತದಾರರಿಗೂ ಎಸ್‌ಐಆರ್ ನಮೂನೆ ವಿತರಿಸಿ, 4,03,576 ಡಿಜಿಟಲೀಕರಣ ಮಾಡಿ ಶೇ.86 ಕ್ಕೂ ಹೆಚ್ಚು ಪ್ರಗತಿ ಸಾಧಿಸಲಾಗಿದ್ದು, ಈ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು ತಮ್ಮ ಹಂತದಲ್ಲಿ ಪರಿಶೀಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಜಿಲ್ಲೆಯಲ್ಲಿ ಮರಣ, ಸ್ಥಳಾಂತರ, ಗೈರು ಅಥವಾ ಎರಡು ಕಡೆ ಹೆಸರು ಹೊಂದಿರುವ, ಇತರೆ ಕಾರಣದಿಂದ ಗಣತಿ ನಮೂನೆ ಸಲ್ಲಿಸದೇ ಇರುವ 65,018 ಮತದಾರರಿದ್ದು, ಈ ಬಗ್ಗೆಯೂ ಸಹ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಕೋರಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಿದ್ದಲ್ಲಿ ಮಾಹಿತಿ ನೀಡುವಂತಾಗಬೇಕು. ಯಾರ ಹೆಸರು ಸಹ ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗುಳಿಯಬಾರದು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ಜಿಲ್ಲಾಧಿಕಾರಿ ಅವರು ನುಡಿದರು. ಕಾಂಗ್ರೆಸ್ ಪಕ್ಷದ ಪ್ರಮುಖರಾದ ತೆನ್ನಿರಾ ಮೈನಾ ಅವರು ಮಾತನಾಡಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ತೊಡಗಿಸಿಕೊಂಡಿವೆ ಎಂದು ಹೇಳಿದರು. ಹಾಡಿಯ ಜನರಲ್ಲಿ ಈ ಬಗ್ಗೆ ಇನ್ನಷ್ಟು ಎಚ್ಚರವಹಿಸಿ ಎಸ್‌ಐಆರ್ ಪ್ರಕ್ರಿಯೆಯ ಪ್ರಗತಿ ಸಾಧನೆಗೆ ಶ್ರಮಿಸಬೇಕಿದೆ. ಬಿಎಲ್‌ಒಗಳು ಸ್ಥಳೀಯರ ವಿಶ್ವಾಸಗಳಿಸಿ ಎಸ್‌ಐಆರ್ ಶೇಕಡಾವಾರು ಪ್ರಗತಿಗೆ ಶ್ರಮಿಸಬೇಕು ಎಂದರು.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಬಿಎಲ್‌ಒಗಳು ಯಾರೂ ಎಂಬುದೇ ಅಷ್ಟಾಗಿ ತಿಳಿದಿರುವುದಿಲ್ಲ. ಆದ್ದರಿಂದ ನೋಡಲ್ ಅಧಿಕಾರಿಗಳು, ಬಿಎಲ್‌ಒಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಎಸ್‌ಐಆರ್ ಪ್ರಕ್ರಿಯೆ ಪ್ರಗತಿಗೆ ಮುಂದಾಗಬೇಕು ಎಂದು ತೆನ್ನೀರ ಮೈನಾ ಅವರು ಸಲಹೆ ಮಾಡಿದರು.

ಭಾರತೀಯ ಜನತಾ ಪಕ್ಷದ ಪ್ರಮುಖರಾದ ಸಜಿಲ್ ಕೃಷ್ಣ ಅವರು ಮಾತನಾಡಿ ಎಸ್‌ಐಆರ್ ಪ್ರಕ್ರಿಯೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಪಕ್ಷ ಅಗತ್ಯ ಜಾಗೃತಿ ಮೂಡಿಸಿದೆ ಎಂದರು. ಬಹುಜನ ಸಮಾಜ ಪಕ್ಷದ ಅಧ್ಯಕ್ಷರಾದ ದಿವಿಲ್ ಕುಮಾರ್ ಅವರು ಹಾಡಿಯ ಜನರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ಹೆಚ್ಚಿನ ನಿಗಾವಹಿಸಬೇಕು. ಐಟಿಡಿಪಿ ಇಲಾಖೆ ಈ ಬಗ್ಗೆ ಇನ್ನಷ್ಟು ಪ್ರತೀ ಹಾಡಿಯಲ್ಲೂ ಸಹ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.

 ಜಾತ್ಯತೀತ ಜನತಾ ದಳದ ಗುಲಾಬಿ ಜನಾರ್ಧನ, ಕಮ್ಯುನಿಸ್ಟ್ ಪಾರ್ಟಿ ಆಪ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಎಚ್.ಪಿ.ರಮೇಶ್ ಅವರು ಎಸ್‌ಐಆರ್ ಪ್ರಕ್ರಿಯೆ ಸಂಬಂಧ ಹಲವು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರು ಎಸ್‌ಐಆರ್ ಪ್ರಕ್ರಿಯೆ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಚುನಾವಣಾ ಶಿರಸ್ತೆದಾರ್ ಮಹೇಶ್, ಅನಿಲ್ ಕುಮಾರ್ ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0