ಸೋಮವಾರಪೇಟೆಯಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ; ಪರಿಶಿಷ್ಟರು ಸೇರಿದಂತೆ ಎಲ್ಲಾ ಜನರ ಶ್ರೇಯೋಭಿವೃದ್ಧಿಗೆ ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕರ್ತವ್ಯ ನಿರ್ವಹಿಸಿ: ಸೋಮಶೇಖರ್

ಸೋಮವಾರಪೇಟೆಯಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ; ಪರಿಶಿಷ್ಟರು ಸೇರಿದಂತೆ ಎಲ್ಲಾ ಜನರ ಶ್ರೇಯೋಭಿವೃದ್ಧಿಗೆ ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕರ್ತವ್ಯ ನಿರ್ವಹಿಸಿ: ಸೋಮಶೇಖರ್

ಮಡಿಕೇರಿ ಏ.22:-ಸೋಮವಾರಪೇಟೆಯ ಖಾಸಗಿ ಕಲ್ಯಾಣ ಮಂಟದಲ್ಲಿ ಪರಿಶಿಷ್ಟ ಜನಾಂಗದವರ ಕುಂದುಕೊರತೆ ಆಲಿಸುವ ಸಭೆಯು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. 

ಪರಿಶಿಷ್ಟ ಜನಾಂಗದವರ ಕುಂದುಕೊರತೆ ಸಭೆಯಲ್ಲಿ ಸುಮಾರು 48 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ದುರಸ್ತಿ, ಹಕ್ಕುಪತ್ರ ವಿತರಿಸುವುದು, ಮನೆ ದಾಖಲಾತಿ, ಅಕ್ರಮ ಸಕ್ರಮ, ಜಾಗ ಅತಿಕ್ರಮಣ ತೆರವುಗೊಳಿಸುವುದು, ಜಮೀನಿಗೆ ತೆರಳಲು ದಾರಿ ಬಿಡಿಸುವುದು, ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಕೃಷಿ, ಆಹಾರ, ಸೆಸ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹೀಗೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. 

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ, ಹಕ್ಕುಪತ್ರ, ನಿವೇಶನ ಒದಗಿಸುವುದು, ಮನೆ ನಿರ್ಮಾಣ, ಕೃಷಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವುದು ಇಂದಿನ ಕುಂದುಕೊರತೆ ಸಭೆಯಲ್ಲಿ ಹೆಚ್ಚಾಗಿ ಕೇಳಿಬಂದವು.  

ಈ ಸಂದರ್ಭದಲ್ಲಿ ಮಾತನಾಡಿದ ಕುಂಬೂರಿನ ಸೋಮಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಪರಿಹರಿಸಬೇಕು. ಇಂದಿಗೂ ಸಹ ನಿವೇಶನ ಹಾಗೂ ಹಕ್ಕುಪತ್ರ ಇಲ್ಲದೆ ಮನೆ ನಿರ್ಮಾಣ ಕಷ್ಟವಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಕೋರಿದರು. 

ಭೂಮಿ ಇರುವವರಿಗೆ ಹಕ್ಕುಪತ್ರ ನೀಡಬೇಕು. ಭೂಮಿ ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸಬೇಕು. ಪರಿಶಿಷ್ಟರು ಇತರರಂತೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಬೇಕು ಎಂದು ಕೋರಿದರು. 

        ಬಸವಯ್ಯ ಅವರು ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇಂದಿಗೂ ಸಹ ಸಂಕಷ್ಟದಲ್ಲಿ ಜೀವನ ದೂಡುತ್ತಿದ್ದು, ಇವರಿಗೆ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಒದಗಿಸಬೇಕು ಎಂದು ಅವರು ಮನವಿ ಮಾಡಿದರು. 

ಕೊಡ್ಲಿಪೇಟೆ, ಶನಿವಾರಸಂತೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟರು ಇದ್ದು, ಈ ಜನರಿಗೆ ನಿವೇಶನ ಹಾಗೂ ಜಮೀನು ಒದಗಿಸಬೇಕು. ಆ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದು ಕೋರಿದರು. 

ಸಾರ್ವಜನಿಕರೊಬ್ಬರು ಮಾತನಾಡಿ ಕಂದಾಯ, ಅರಣ್ಯ ಹಾಗೂ ಭೂ ದಾಖಲೆಗಳ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಮೂರು ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿದಾಗ ಸಾರ್ವಜನಿಕರಿಗೆ ಸುಲಭವಾಗಿ, ಸುಲಲಿತವಾಗಿ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಆ ನಿಟ್ಟಿನಲ್ಲಿ ಇನ್ನೂ ಮುಂದಾದರೂ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಬೇಕು ಎಂದರು. 

ಭೂಮಿ ಒತ್ತುವರಿ ಸಂಬಂಧ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ನಿಜವಾದ ಅರ್ಹರಿಗೆ ಭೂಮಿ ಸೇರಬೇಕು. ಆ ನಿಟ್ಟಿನಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.  

ರಾಜು ಅವರು ಮಾತನಾಡಿ ಕುಶಾಲನಗರ ಬಳಿಯ ಸಿದ್ದಲಿಂಗಪುರ ಬಳಿ ಸರ್ಕಾರಿ ಭೂಮಿ ಇದ್ದು, ಆ ಭೂಮಿಯಲ್ಲಿ ಇತರರು ಅತಿಕ್ರಮಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಇದನ್ನು ತೆರವುಗೊಳಿಸುವಂತಾಗಬೇಕು. ಹಾಗೆಯೇ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಕಾಲದಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಅವರು ಮನವಿ ಮಾಡಿದರು. 

ಉದಯ ಕುಮಾರ್ ಅವರು ಮಾತನಾಡಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಪೊಲೀಸ್ ಇಲಾಖೆಯ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯವರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿದ್ದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ನಡೆದುಕೊಳ್ಳುವಂತಾಗಬೇಕು ಎಂದು ಕೋರಿದರು. 

ಕುಂದುಕೊರತೆ ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಹಶೀಲ್ದಾರ್ ಮತ್ತು ತಾ.ಪಂ.ಇಒಗಳು ತಿಂಗಳಿಗೊಮ್ಮೆಯಾದರೂ ಪರಿಶಿಷ್ಟರ ಕುಂದುಕೊರತೆ ಸಭೆಯನ್ನು ಏರ್ಪಡಿಸುವಂತಾಗಬೇಕು ಎಂದು ನಿರ್ದೇಶನ ನೀಡಿದರು. 

ಹೋಬಳಿ ಮಟ್ಟದಲ್ಲಿಯೂ ಸಹ ಕುಂದುಕೊರತೆ ಸಭೆ ಏರ್ಪಡಿಸಿ ಸಮಸ್ಯೆಗಳನ್ನು ಆಲಿಸಿದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ಹಾಗೂ ಬದ್ಧತೆಯಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. 

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದು, ಹೋಬಳಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಕಾಲದಲ್ಲಿ ಕರ್ತವ್ಯ ನಿರ್ವಹಿಸಿದಲ್ಲಿ ಹಲವು ಸಮಸ್ಯೆಗಳನ್ನು ಸ್ಥಳೀಯ ಹಂತದಲ್ಲಿ ಪರಿಹರಿಸಬಹುದು. ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ತಹಶೀಲ್ದಾರರಾದ ಕೃಷ್ಣಮೂರ್ತಿ, ಕಿರಣ್ ಗೌರಯ್ಯ, ತಾ.ಪಂ.ಇಒ ಪರಮೇಶ್ ಅವರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. 

ತಾಲ್ಲೂಕು ಮಟ್ಟದ ಅಧಿಕಾರಿಗಳು, ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ಸಾರ್ವಜನಿಕರು ಪಾಲ್ಗೊಂಡು ಲಿಖಿತವಾಗಿ ಮಾಹಿತಿ ನೀಡಿ ಗಮನ ಸೆಳೆದರು.