ಕೊಡಗಿಗೆ ಪ್ರತ್ಯೇಕ ಯೋಜನೆ ಭರವಸೆ: 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ:ಸಿ.ಎಂ ಡಿ.ಕೆ. ಶಿವಕುಮಾರ್
admincoorgdaily

ಮಡಿಕೇರಿ:"ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಂಡಿತಾ. ಕೊಡಗಿಗೆ ಪ್ರತ್ಯೇಕವಾದ ಬೃಹತ್ ಯೋಜನೆ ಜಾರಿಗೆ ತರಲು ಬದ್ಧನಿದ್ದೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಭಾಗಮಂಡಲದಲ್ಲಿ ಕಾವೇರಿ ಪೂಜೆ ಸಲ್ಲಿಸಿದ ಬಳಿಕ ಮಡಿಕೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
"ನಾಡಿಗೆ ಉತ್ತಮ ಮಳೆ, ಬೆಳೆ, ಸಮೃದ್ಧಿ ಮತ್ತು ಶಾಂತಿ ನೆಲೆಸಬೇಕು ಎಂದು ಭಾಗಮಂಡಲದಲ್ಲಿ ಪ್ರಾರ್ಥಿಸಿದ್ದೇನೆ. ತಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ನಿಮ್ಮೆಲ್ಲರ ಆಶೀರ್ವಾದದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು" ಎಂದು ತಿಳಿಸಿದರು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ಎ.ಎಸ್. ಪೊನ್ನಣ್ಣ ಅವರು ಕೊಡಗಿಗೆ ದೊಡ್ಡ ಶಕ್ತಿ ತಂದು ಕಾಂಗ್ರೆಸ್ ಪಕ್ಷವನ್ನು ಪ್ರಬಲಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.
"ನಿಮ್ಮ ಪ್ರತಿನಿಧಿಯಾಗಿ ಮತ್ತು ನಿಮ್ಮ ಶಾಸಕರೊಂದಿಗೆ ಸೇರಿ ಈ ಜಿಲ್ಲೆಗೆ ಒಂದು ಪ್ರತ್ಯೇಕವಾದಂತ ಯೋಜನೆಯನ್ನು ಮುಂದಿನ ದಿನಗಳಲ್ಲಿ ನೀಡಲು ಬದ್ಧನಿದ್ದೇನೆ" ಎಂದು ಭರವಸೆ ನೀಡಿದರು. 2028 ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರಲಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಶಾಸಕ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸಾವಿರಾರು ಕಾರ್ಯಕರ್ತರು ಡೊಳ್ಳು ಕುಣಿತದೊಂದಿಗೆ ಭವ್ಯ ಸ್ವಾಗತ ನೀಡಿದರು. ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಗೌರವಿಸಲಾಯಿತು.