ಲೈಂಗಿಕ ಕಿರುಕುಳ ಆರೋಪ: ಬೆಂಗಳೂರು ವಿವಿ ಮಾಜಿ ಕುಲಸಚಿವ ಮೈಲಾರಪ್ಪ ಬಂಧನ

Oct 31, 2025 - 21:48
Oct 31, 2025 - 21:48
 0  795
ಲೈಂಗಿಕ ಕಿರುಕುಳ ಆರೋಪ: ಬೆಂಗಳೂರು ವಿವಿ ಮಾಜಿ ಕುಲಸಚಿವ ಮೈಲಾರಪ್ಪ ಬಂಧನ
Photo credit: TV09

ಬೆಂಗಳೂರು: ಲೈಂಗಿಕ ಕಿರುಕುಳ ನೀಡಿದ ಆರೋಪದ ಅಡಿ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಬಿ.ಸಿ. ಮೈಲಾರಪ್ಪ ಅವರನ್ನು ಬಸವೇಶ್ವರನಗರ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

37 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಅಕ್ಟೋಬರ್‌ 9ರಂದು ಮೈಲಾರಪ್ಪ ಹಾಗೂ ಜಯಮ್ಮ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾಗ ಲೈಂಗಿಕ ಕಿರುಕುಳಕ್ಕೆ ಪುರಾವೆ ದೊರೆತಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಮೈಲಾರಪ್ಪ ಅಲಿಯಾಸ್ ಚಿಕ್ಕಮೆಲುರಪ್ಪ ಅವರು ಸದಾಶಿವನಗರದಲ್ಲಿರುವ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ 2022ರ ನವೆಂಬರ್‌ನಲ್ಲಿ ದೂರುದಾರ ಮಹಿಳೆಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು. 2024ರ ಮೇವರೆಗೆ ಅವರು ಅಲ್ಲಿ ಕಾರ್ಯನಿರ್ವಹಿಸಿದ್ದರು.

2023ರ ಡಿಸೆಂಬರ್‌ 23ರಂದು ಮಹಿಳೆಯ ಪತಿ ಮೃತಪಟ್ಟ ನಂತರ ಅತ್ತೆ ಹಾಗೂ ಮಾವ ವಾಸಿಸುತ್ತಿದ್ದ ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡಬೇಕೆಂದು ಒತ್ತಡ ಹೇರಿದ್ದು, ಮನೆಯನ್ನು ಬರೆದುಕೊಡದಿದ್ದರೆ ಪತಿಯ ಸಾವಿಗೆ ನೀನೇ ಕಾರಣವೆಂದು ಬೆದರಿಕೆ ನೀಡಿದ್ದರು. ಈ ಕುರಿತು ಮಹಾಲಕ್ಷ್ಮಿಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಮೈಲಾರಪ್ಪ ಅವರು ಮಹಿಳೆಯ ಪರವಾಗಿ ಓಡಾಟ ನಡೆಸುತ್ತಿದ್ದರು. ಇದೇ ವೇಳೆ ಮಹಿಳೆಯ ತಂದೆಯ ಆಸ್ತಿಯ ಹಂಚಿಕೆ ವಿಚಾರದಲ್ಲಿಯೂ ಕಲಹ ಉಂಟಾಗಿ, ಸಹೋದರ ಮತ್ತು ವಕೀಲ ರಘು ಅವರ ಸಹಾಯದಿಂದ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.

ಇದರಿಂದ ಅಸಮಾಧಾನಗೊಂಡ ಮೈಲಾರಪ್ಪ ಅವರು ಮಹಿಳೆಯನ್ನು ಹೋಟೆಲ್ ಬಳಿ ಕರೆಸಿ ಕೆಲ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದು, “ನನ್ನ ಜೀವನದಲ್ಲಿ ಏನಾದರೂ ತೊಂದರೆ ಉಂಟಾದರೆ ಅದಕ್ಕೆ ವಕೀಲ ರಘು ಕಾರಣ” ಎಂಬ ವಿಷಯವಿದ್ದ ದಾಖಲೆ ನೋಡಿ ಮಹಿಳೆ ಸಹಿ ಹಾಕಲು ನಿರಾಕರಿಸಿದ್ದರು. ಕೋಪಗೊಂಡ ಮೈಲಾರಪ್ಪ ನಡುರಸ್ತೆಯಲ್ಲೇ ನಿಂದಿಸಿ, ಆಕೆಯ ಜುಟ್ಟು ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆಗೆ ನಿರಂತರವಾಗಿ ಕರೆ ಮಾಡಿ ಅಸಭ್ಯವಾಗಿ ನಿಂದನೆ ಮಾಡುವುದು, ಮನೆಯಲ್ಲಿ ಮಕ್ಕಳು ಇಲ್ಲದ ಸಮಯದಲ್ಲಿ ಬಂದು ಬಾಗಿಲು ಬಡಿಯುವುದು, ಹಿಂಬಾಲಿಸುವುದು ಹಾಗೂ ಸಂಘದವರ ಮೂಲಕ ಒತ್ತಡ ಹೇರುವುದು, ಸಹಕರಿಸಕೊಂಡು ಹೋಗುವಂತೆ ಹೇಳುವುದು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಅಕ್ಟೋಬರ್‌ 30ರಂದು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಮೈಲಾರಪ್ಪ ವಿರುದ್ಧ ಮತ್ತೊಂದು ಪ್ರಕರಣವೂ ದಾಖಲಾಗಿದ್ದು, ಕಚೇರಿಗೆ ಕರೆಸಿ ಚಾಕು ತೋರಿಸಿ ಬೆದರಿಕೆ ಹಾಕಿದ ಆರೋಪ ದಾಖಲಾಗಿತ್ತು ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0