ಪ್ರೀತಿಯ ಹೆಸರಿನಲ್ಲಿ ಲೈಂಗಿಕ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ಸ್ಯಾಂಡಲ್ ವುಡ್ ನಟಿಯ ಸಂಬಂಧಿ, ಎಫ್‌ಐಆರ್ ದಾಖಲು

Nov 30, 2025 - 17:38
 0  1.6k
ಪ್ರೀತಿಯ ಹೆಸರಿನಲ್ಲಿ ಲೈಂಗಿಕ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ಸ್ಯಾಂಡಲ್ ವುಡ್ ನಟಿಯ ಸಂಬಂಧಿ, ಎಫ್‌ಐಆರ್  ದಾಖಲು
Photo credit: TV09

ಹಾಸನ/ಬೆಂಗಳೂರು, ನವೆಂಬರ್ 30:ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ 22 ವರ್ಷದ ಯುವತಿ ಪ್ರೇಮಿಯಿಂದ ಬಂದಿದ್ದ ಲೈಂಗಿಕ ಹಾಗೂ ಮಾನಸಿಕ ಕಿರುಕುಳವನ್ನು ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ. 21ರಂದು ನಗರದ ಪಾಂಡುರಂಗ ನಗರದಲ್ಲಿ ನಡೆದಿದೆ.

10 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತರನ್ನು ಅಚಲ ಎಂದು ಗುರುತಿಸಲಾಗಿದೆ. ಈಕೆ ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳು. ಇಂಜಿನಿಯರಿಂಗ್ ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರುವ ಹಂತದಲ್ಲಿದ್ದ ಈಕೆ, ತನ್ನ ದೂರದ ಸಂಬಂಧಿ ಮಯಾಂಕ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದರು. ಮಯಾಂಕ್ ಮದುವೆಯ ಭರವಸೆ ನೀಡಿ ಅಚಲ ಮೇಲೆ ಲೈಂಗಿಕ ಸಂಪರ್ಕಕ್ಕೆ ಒತ್ತಡಹಾಕುತ್ತಿದ್ದ, ವಿರೋಧಿಸಿದಾಗ ದೈಹಿಕ ಹಲ್ಲೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದನೆಂದು ಕುಟುಂಬಸ್ಥರು ದೂರಿದ್ದಾರೆ.

ಪದೇಪದೆ ಫೋನ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಮಯಾಂಕ್ ಡ್ರಗ್ ವ್ಯಸನಿಯಾಗಿದ್ದು, ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿರುವುದು ತಿಳಿದ ನಂತರ ಅಚಲ ಆಘಾತಕ್ಕೊಳಗಾಗಿದ್ದಾರೆ. ಬಳಿಕ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ.

ಘಟನೆಯ ಹಿನ್ನೆಲೆಯಲ್ಲಿ ಅಚಲದ ತಂದೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಯಾಂಕ್ ಮತ್ತು ಅವನ ತಾಯಿ ಮೈನಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೂ ಬಂಧನಕ್ಕೆ ಮುಂದಾಗದ ಪೊಲೀಸರಿಂದ ಕುಟುಂಬಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಘಟನೆಯ ಮುನ್ನ ಅಚಲ ಮಯಾಂಕ್‌ಗೆ ಕಳುಹಿಸಿದ್ದ ಸಂದೇಶಗಳಲ್ಲಿ — “ನಿನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ… ನೀನು ನನ್ನ ಕನಸುಗಳನ್ನು ನಾಶ ಮಾಡಿದ್ದೀಯ… ಮಾಡಿದ ಮೋಸಕ್ಕೆ ಬೆಲೆ ಕಟ್ಟಲೇಬೇಕು” — ಎಂದು ನೋವು ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 0