ಶಂಸುಲ್ ಉಲಮಾ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ

Nov 27, 2025 - 15:12
 0  546
ಶಂಸುಲ್ ಉಲಮಾ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ

ವಿರಾಜಪೇಟೆ :- ಸಮೀಪದ ಪೆರುಂಬಾಡಿಯಲ್ಲಿರುವ ಶಂಸುಲ್ ಉಲಮ ಎಜುಕೇಶನಲ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಂಭ್ರಮ ವಿವಿಧ ಸಾಂಸ್ಕೃತಿಕ, ಆರೋಗ್ಯ,ಪರಿಸರ ಕಾಳಜಿ,ಮಾದಕ ವಸ್ತುಗಳ ವಿರುದ್ಧ ಜಾಗೃತಿ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು.

ಎಸ್ ಇ ಎ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕರಾದ ಬಿಂದು ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಅದೆಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಲವು ಸಮಸ್ಯೆಗಳ ನಡುವೆಯೂ ಶಿಕ್ಷಣ ಕಲಿತು ಉನ್ನತ ಹುದ್ದೆಯೊಂದಿಗೆ ಸೇವಾ ಸಾಧನೆ ಮೂಲಕ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಶಾಲೆ ಕಾಲೇಜುಗಳಲ್ಲಿ ಪೂರಕವಾದ ವಾತಾವರಣ ಇದ್ದು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

 ಬ್ಲಾಕ್ ಸಂಪನ್ಮೂಲ ವ್ಯಕ್ತಿ ಶೈಲಾ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಮಹಿಳಾ ಕಾಲೇಜು ಪ್ರಾರಂಭ ಮಾಡಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವು ನೀಡಿ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

 ಮಾಜಿ ಸೈನಿಕ ಸಲಾಂ ಮಾತನಾಡಿ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಸಂಸ್ಥೆ ನೂರಾರು ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ನೀಡುತ್ತಿದೆ ಬಡ ನಿರ್ಗತಿಕ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ದೊಂದಿಗೆ ವೃತ್ತಿ ಕೌಶಲ್ಯ ತರಬೇತಿಗಳನ್ನು ನೀಡಿ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಸಂಸ್ಥೆಗೆ ದಾನಿಗಳು ಹೆಚ್ಚಿನ ನೆರವು ನೀಡಬೇಕೆಂದರು.

ಸಂಸ್ಥೆಯ ಪ್ರಾಂಶುಪಾಲೆ ಭಾನುಮತಿ ಮಾತನಾಡಿ ಹೆಣ್ಣು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು ಶೈಕ್ಷಣಿಕ ಸಾಲಿನಲ್ಲಿ ಶೇ 100ರಷ್ಟು ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಸಾಧನೆ ತೋರಿದ್ದಾರೆ. ಕಲಿಕೆಗೆ ಪೂರಕವಾದ ಎಲ್ಲಾ ಸೌಲಭ್ಯಗಳಿದ್ದು ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸಲು ಪೋಷಕರು ಮುಂದಾಗಬೇಕೆಂದರು.

 ಶಂಸುಲ್ ಉಲಮ ಎಜುಕೇಶನಲ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥ ಸಿಪಿಎಂ ಬಶೀರ್ ಹಾಜಿ ಮಾತನಾಡಿ ಅನಾಥ ನಿರ್ಗತಿಕ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ಉನ್ನತ ಶಿಕ್ಷಣವು ನೀಡುತ್ತಿದ್ದು ಇದರಿಂದ ನೂರಾರು ಹೆಣ್ಣು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಮುಂದೆ ಬರಬೇಕೆಂದರು. ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಆರೋಗ್ಯ ಕಾಳಜಿ, ಪರಿಸರ ಜಾಗೃತಿ, ಮಾದಕ ವಸ್ತುಗಳ ವಿರುದ್ಧ ಜಾಗೃತಿ, ಶಿಕ್ಷಣದ ಮಹತ್ವ, ಹಿರಿಯರಿಗೆ ಗೌರವ, ತಂದೆ ತಾಯಿಗಳೊಂದಿಗೆ ಪ್ರೀತಿ ವಾತ್ಸಲ್ಯ ಹಲವು ವೈವಿಧ್ಯಮಯ ನಾಟಕ, ನೃತ್ಯ ಕಾರ್ಯಕ್ರಮ ನೆರೆದಿದ್ದವರ ಮನಸುರಗೊಳಿಸಿತು. ದೇಶದ ಆಚಾರ ವಿಚಾರ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ವಿವಿಧ ರಾಜ್ಯಗಳ ನೃತ್ಯ ಪ್ರದರ್ಶನವು ಗಮನ ಸೆಳೆಯಿತು.

ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ವೇದಿಕೆಯಲ್ಲಿ ಅರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಫಾತಿಮಾ, ಉಪಾಧ್ಯಕ್ಷ ಉಪೇಂದ್ರ, ಅಭಿವೃದ್ಧಿ ಅಧಿಕಾರಿ ಪ್ರಮೋದ್, ಕ್ಲಸ್ಟರ್ ಅಧಿಕಾರಿ ನೀಲನ, ಸಮಾಜ ಸೇವಕರಾದ ಅಬ್ದುಲ್ ಸತ್ತಾರ್, ಅಬ್ದುಲ್ ರಶೀದ್, ಅಶ್ರಫ್, ನಾಸರ್ ಜನಾಬ್ ರಶೀದ್ ಹಾಜಿ, ಅಬ್ದುಲ್ ಶುಕೂರ್, ಬಶೀರ್ ಹಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1