ಶನಿವಾರಸಂತೆ; ಹುಲಸೆಯಲ್ಲಿ ನಮ್ಮೂರು ನಮ್ಮ ಕೆರೆಗೆ ಬಾಗಿನ ಅಪರ್ಣೆ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮ
admincoorgdaily

ಶನಿವಾರಸಂತೆ:ಫೆ19:-ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರ್ಥಿಕ, ಶಿಕ್ಷಣ, ಸಾಮಾಜಿಕ, ಕೃಷಿ, ಜಲ ಸಂಪನ್ಮೂಲ, ಆರೋಗ್ಯ, ಸಾಂಸ್ಕೃತಿಕ, ಸ್ವಚ್ಚತ್ತೆ, ಪರಿಸರ ನೈರ್ಮಲ್ಯ ಮುಂತಾದವುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಸೋಮವಾರಪೇಟೆ ತಾಲ್ಲೂಕು ಯೋಜನಾಧಿಕಾರಿ ಹನುಮಂತ ಅಂಗಡಿ ಅಭಿಪ್ರಾಯಪಟ್ಟರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೋಮವಾರಪೇಟೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಕೊಡ್ಲಿಪೇಟೆ ಮತ್ತು ಶನಿವಾರಸಂತೆ ವಲಯ ಹಂಡ್ಲಿ ಗ್ರಾ.ಪಂ.ಯ ಹುಲಸೆ ಕೆರೆ ಅಭಿವೃದ್ದಿ ಸಮಿತಿ ವತಿಯಿಂದ ಹುಲಸೆ ಗ್ರಾಮದಲ್ಲಿ ಅಭಿವೃದ್ದಿ ಪಡಿಸಿದ 865ನೇ ನಮ್ಮೂರು ನಮ್ಮ ಕೆರೆಗೆ ಬಾಗಿನ ಅರ್ಪಣೆ ಮತ್ತು ಕೆರೆ ಹಸ್ತಾಂತ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಕ್ಷೇತ ಧರ್ಮಸ್ಥಳದ ಧರ್ಮಾಧಿಕಾರಿ ಡಾ,ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಅವರು ರೂಪಿಸಿರುವ ಹಲವಾರು ಕಾರ್ಯಕ್ರಮಗಳು ಮತ್ತು ಅವರ ದೂರದೃಷ್ಟಿ ಮತ್ತು ಮಾರ್ಗದರ್ಶನದ ಮೂಲಕ ಸಮಾಜದ ಅಭಿವೃದ್ದಿ ಗ್ರಾಮಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಕೃಷಿ ಮತ್ತು ರೈತರ ಹಿತದೃಷ್ಟಿಯಿಂದ ಗ್ರಾಮಾಭಿವೃದ್ದಿ ಸಂಸ್ಥೆಯು ರಾಜ್ಯದಲ್ಲಿ ಇದುವರೆಗೆ ಒಂದು ಸಾವಿರಕಿಂತ ಹೆಚ್ಚಿನ ಕೆರೆಗಳನ್ನು ಹೂಳೆತ್ತಿ ಅಭಿವೃದ್ದಿ ಪಡಿಸಿ ರೈತರ ಅನುಕೂಲಕ್ಕೆ ಹಸ್ತಾಂತರಿಸಿದೆ. ಹುಲಸೆ ಗ್ರಾಮದ ಕೆರೆಯನ್ನು 2. 80 ಲಕ್ಷ ರು ವೆಚ್ಚದಲ್ಲಿ ಅಭಿವೃದ್ದಿ ಪಡಿಸಿದ್ದು ಇದರಿಂದ ಗ್ರಾಮದ 40 ರೈತ ಕುಟುಂಬಗಳು ಸೇರಿದಂತೆ 200 ಏಕರೆ ರೈತರ ಜಮೀನುಗಳಿಗೆ ನೀರು ಒದಗಿಸಿದಂತಾಗುತ್ತದೆ ಎಂದು ಹೇಳಿದರು.
ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ-ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಂಸ್ಥೆಯು ಸರಕಾರ ಮಾಡಬೇಕಿದ್ದ ಕೆಲಸಗಳನ್ನು ಮಾಡುತ್ತಿದೆ ದುಶ್ಚಟವನ್ನು ದೂರ ಮಾಡುವಂತಹ ಸಮಾಜವನ್ನು ಜಾಗೃತಿ ಮೂಡಿಸುತ್ತಿರುವ ಕಾರ್ಯದ ಜೊತೆಯಲ್ಲಿ ಆರ್ಥಿಕ, ಶೈಕಣಿಕ, ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಶ್ರಮಿಸುತ್ತಿರುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನಿಯಕರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜನ ಜಾಗೃತಿ ಸಮಿತಿ ಸದಸ್ಯ ಭಗವಾನ್, ಸದಸ್ಯೆ ಪೂರ್ಣಿಮಾ ಕಿರಣ್ ಮಾತನಾಡಿದರು. ಹುಲಸೆ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಭರತ್ ಹುಲಸೆ ಅಧ್ಯಕ್ಷತೆವಹಿಸಿದ ಸಮಾರಂಭದಲ್ಲಿ ಹಂಡ್ಲಿ ಗ್ರಾ.ಪಂ.ಪಿಡಿಒ ಅಂಜನಾದೇವಿ, ಗ್ರಾ.ಪಂ.ಉಪಾಧ್ಯಕ್ಷ ಎಚ್.ಎಸ್.ಅಶೋಕ್, ಗ್ರಾ.ಪಂ.ಸದಸ್ಯ ವೀರೇಂದ್ರ ಕುಮಾರ್, ಹಂಡ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿದಾನಂದ್, ಕೃಷಿ ಮೇಲ್ವಿಚಾರಕ ಹರೀಶ್, ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ರಾಜಣ್ಣ, ಶನಿವಾರಸಂತೆ ವಲಯ ಮೇಲ್ವಿಚಾರಕಿ ಜಯಶ್ರೀ, ಕೆರೆ ಅಭಿವೃದ್ದಿ ಸದಸ್ಯರು, ಗ್ರಾಮದ ಪ್ರಮುಖರು ಹಾಜರಿದ್ದರು.
ಈ ಸಂದರ್ಭದಲ್ಲಿ ಮಹಿಳೆಯರು ಕೆರೆಗೆ ಬಾಗಿನ ಸಮರ್ಪಿಸಿದರು ನಂತರ ಸಮಾರಂಭದಲ್ಲಿ ಸಂಸ್ಥೆ ಅಭಿವೃದ್ದಿ ಪಡಿಸಿದ ಕೆರೆಯ ದಾಖಲನ್ನು ಪಿಡಿಒ ಅಂಜನಾದೇವಿ ಮೂಲಕ ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.