Kodagu

ವಿರಾಜಪೇಟೆ ಗೌರಿಕೆರೆ ತಡೆಗೋಡೆ ಕುಸಿತ ಪ್ರಕರಣ ಭೂ ಕುಸಿತಕ್ಕೆ ಕಾರಣವಾಗಬೇಕಾ? ಎಂಎಲ್‌ಸಿ ಸುಜಾ ಕುಶಾಲಪ್ಪ ಗರಂ

admincoorgdaily

ವಿರಾಜಪೇಟೆ ಗೌರಿಕೆರೆ ತಡೆಗೋಡೆ ಕುಸಿತ ಪ್ರಕರಣ ಭೂ ಕುಸಿತಕ್ಕೆ ಕಾರಣವಾಗಬೇಕಾ?  ಎಂಎಲ್‌ಸಿ ಸುಜಾ ಕುಶಾಲಪ್ಪ ಗರಂ

ವಿರಾಜಪೇಟೆ: ವಿರಾಜಪೇಟೆ ಸಮೀಪದ ಗೌರಿಕೆರೆ ಪ್ರದೇಶದಲ್ಲಿ ತಡೆಗೋಡೆ ಕುಸಿತದಿಂದ ಮನೆಗೆ ಹಾನಿಯಾದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. 

   ಘಟನೆ ನಡೆದು 20 ದಿನಗಳಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪುರಸಭೆ ಅಧಿಕಾರಿಗಳ ವಿರುಧ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಂಬಂಧಪಟ್ಟ ಇಲಾಖೆಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಘಟನೆಯ ಹಿನ್ನೆಲೆ:

  ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಾಗದಲ್ಲಿ ಅಕ್ರಮ ಕಾಮಗಾರಿ ನಡೆಸಿದ್ದಾರೆ. ಮನೆಯ ಮಾಲೀಕರಾದ ಶಾಲಿನಿ ಅವರು ಊರಿನಲ್ಲಿ ಇಲ್ಲದ ಸಂದರ್ಭ ಈ ರೀತಿ ಕಾಮಗಾರಿ ಮಾಡಿ ತಡೆಗೋಡೆ ಕುಸಿಯುವಂತೆ ಮಾಡಿದ್ದಾರೆ. ಕಾಮಗಾರಿಯ ಪರಿಣಾಮ, ಪಕ್ಕದಲ್ಲಿರುವ ನಿವಾಸಿ ಶಾಲಿನಿ ಅವರ ಮನೆಯ ಹಿಂಭಾಗದ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ.

 ಸಂತ್ರಸ್ತರ ಪರದಾಟ: 

ಘಟನೆ ಬಳಿಕ ಸಂತ್ರಸ್ತರಾದ ದಿ. ಸುಕುಮಾರ್ ಅವರ ಪತ್ನಿ ಶಾಲಿನಿ ವಿರಾಜಪೇಟೆ ಪೋಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದರು. ಆದರೆ ಪುರಸಭೆ ಅಧಿಕಾರಿಗಳು ಹಾಗೂ ಅಭಿಯಂತರರು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

  ಖಾಸಗಿ ಕಾಮಗಾರಿಯಿಂದಾಗಿ ತಡೆಗೋಡೆ ಸಂಪೂರ್ಣವಾಗಿ ಕುಸಿದಿದೆ. ಕಲ್ಲು-ಮಣ್ಣು ಕೆಳಗೆ ಜಮೆಯಾಗಿದ್ದು, ಮನೆಯ ಹಿಂಭಾಗ ನೇರವಾಗಿ ಅಪಾಯಕ್ಕೆ ಸಿಲುಕಿದೆ. ಮುಂದೆ ಮಳೆ ಬಂದರೆ ಮನೆ ಕುಸಿದು ಕೆಳಗೆ ಬೀಳುವ ಹಂತದಲ್ಲಿದೆ. ಯಾವುದೇ ಪರವಾನಗಿ ತೆಗೆದುಕೊಳ್ಳದೆ ಸ್ಥಳದ ಮಾಲೀಕರು ಅಕ್ರಮವಾಗಿ ಯಂತ್ರಗಳ ಮೂಲಕ ಬರೆಕೊರೆದ ಪರಿಣಾಮ ಸ್ಥಳದಲ್ಲಿ ನೀರು ತುಂಬಿಕೊಂಡು ಕೆರೆಯಾಗಿ ಮಾರ್ಪಡಾಗಿದೆ. ಮನೆಯ ತಡೆಗೋಡೆ ಕುಸಿತಗೊಂಡು ಮಣ್ಣು ಸಡಿಲಗೊಂಡಿದೆ. ಇನ್ನೂ ಹೆಚ್ಚು ಮಳೆಯಾದಲ್ಲಿ ಮನೆ ಸಂಪೂರ್ಣವಾಗಿ ಕುಸಿದು ಬೀಳಲಿದೆ. ಇದರಿಂದ ಜೀವಹಾನಿ ಸಂಭವಿಸುವುದು ಖಚಿತ. ಅಕ್ಕಪಕ್ಕ ತುಂಬಾ ಮನೆಗಳಿದ್ದು ಅದಕ್ಕೂ ಸಮಸ್ಯೆಯಾಗಲಿದೆ. ಇದರಿಂದ ಸ್ಥಳಿಯರು ಆತಂಕಗೊಂಡಿದ್ದಾರೆ.

ಸ್ಥಳ ಪರಿಶೀಲನೆ ಮತ್ತು ಪ್ರಮುಖ ಅಂಶಗಳು,ಅಪಾಯದ ಎಚ್ಚರಿಕೆ:

  ಎಂಎಲ್ಸಿ ಸುಜಾ ಕುಶಾಲಪ್ಪ ಅವರು ಸ್ಥಳ ಪರಿಶೀಲಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಮಳೆ ಜೋರಾಗಿ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ, ಮನೆಯ ಮಾಲೀಕರು 6 ತಿಂಗಳು ಊರಲ್ಲಿ ಸಂದರ್ಭ ಅಕ್ರಮವಾಗಿ ಬಂಡೆಗಳನ್ನು ಸ್ಫೋಟಿಸಿದ್ದಾರೆ. ಇದರಿಂದ ಎರಡು ಮನೆಗಳಿಗೆ ಹಾನಿಯಾಗಿದೆ. ಇದರಿಂದ ಮನೆಯ ಮಾಲೀಕರು ಕಂಪ್ಲೇಂಟ್ ಮಾಡಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆಮಾಡಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಕೂಡಲೇ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.

ಇಲಾಖೆಗಳಿಗೆ ಸೂಚನೆ;

    ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮತ್ತು ವಿರಾಜಪೇಟೆ ತಹಸೀಲ್ದಾರ್ ಅವರಿಗೆ ಸಂತ್ರಸ್ತ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಕ್ರಮಕ್ಕೆ ಸೂಚಿಸಿದ್ದಾರೆ.ಶಾಶ್ವತ ಪರಿಹಾರಕ್ಕೆ ಒತ್ತಾಯ: ಕುಸಿದಿರುವ ತಡೆಗೋಡೆಯ ಬದಲಿಗೆ ವೈಜ್ಞಾನಿಕವಾಗಿ ಬಲವಾದ ಶಾಶ್ವತ ತಡೆಗೋಡೆ ನಿರ್ಮಿಸಬೇಕು. ತಾತ್ಕಾಲಿಕ ಕ್ರಮದಿಂದ ಮತ್ತೆ ಅವಘಡ ಸಂಭವಿಸುವ ಭೀತಿಯಿದೆ.

ನಷ್ಟ ಪರಿಹಾರ: 

    ಸಂತ್ರಸ್ತ ಮನೆಗೆ ಉಂಟಾದ ಹಾನಿಯ ಪ್ರಮಾಣವನ್ನು ಅಂದಾಜು ಮಾಡಿ, ಕೂಡಲೇ ನಷ್ಟ ಪರಿಹಾರವನ್ನು ಸಂತ್ರಸ್ತ ಕುಟುಂಬಕ್ಕೆ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

   ಅಧಿಕಾರಿಗಳ ವಿರುದ್ಧ ಅಸಮಾಧಾನ: ಜನರ ಜೀವಕ್ಕೆ ಅಪಾಯವಿರುವ ಸಂದರ್ಭದಲ್ಲೂ 20 ದಿನಗಳವರೆಗೆ ಯಾವುದೇ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡದಿರುವುದು ಆಡಳಿತ ವ್ಯವಸ್ಥೆಯ ಗಂಭೀರ ವೈಫಲ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

   ಸ್ಥಳೀಯರ ಒತ್ತಾಯ:

 ಅಧಿಕಾರಿಗಳು ಇನ್ನು ಮುಂದೆ ವಿಳಂಬ ಮಾಡದೆ, ಮಳೆಗಾಲ ಮುಗಿಯುವ ಮುನ್ನವೇ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಶಾಲಿನಿ ಅವರ ಮಾತು:

  ಈ ಕುರಿತು ಮಾಹಿತಿ ನೀಡಿದ ಮಾಲೀಕರಾದ ಶಾಲಿನಿ ಅವರು, ಕಳೆದ 6 ತಿಂಗಳ ಹಿಂದೆ ಮಗಳ ಪತಿ ನಿಧನ ಹೊಂದಿದ್ದ ಹಿನ್ನಲೆ ಮಗಳ ಹತ್ತಿರ ಹೋಗಿದ್ದೆ. ಆ ಸಂಕಟದಲ್ಲಿದ್ದ ನಮ್ಮ ಕುಟುಂಬಕ್ಕೆ ಮರಳಿ ಮನೆಗೆ ಬಂದಾಗ ಈ ಅಘಾತ ಕಾದಿತ್ತು. ಇದೀಗ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತಿಲ್ಲ. ಮಳೆ ಬಂದರೆ ಆತಂಕ ಹೆಚ್ಚಾಗುತ್ತದೆ. ರಾತ್ರಿ ದೈರ್ಯವಾಗಿ ನಿದ್ದೆ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಇದುವರೆಗೂ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ. ಇಲ್ಲಿ ಹೇಗೆ ಇರುವುದು ಎಂಬ ಚಿಂತೆ ಕಾಡುತ್ತಿದೆ. ಸಂಬಂಧಪಟ್ಟವರು ನಮ್ಮ ಸಂಕಷ್ಟಕ್ಕೆ ಮಿಡಿದು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನೋವನ್ನು ವ್ಯಕ್ತಪಡಿಸಿದರು.

ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಭೇಟಿ

   ಗೌರಿಕೆರೆ ನಿವಾಸಿ ಶಾಲಿನಿ ಅವರು ಸಂಕಟದಲ್ಲಿದ್ದು ಊರಲ್ಲಿ ಇಲ್ಲದ ಸಂದರ್ಭದಲ್ಲಿ ಈ ರೀತಿ ಅಕ್ರಮವಾಗಿ ಕಾಮಗಾರಿ ನಡೆಸಿ ತಡೆಗೋಡೆ ಕುಸಿಯುವಂತೆ ಮಾಡಲಾಗಿದೆ. ಕೊಡಗಿನಲ್ಲಿ ಮಳೆ ಹೆಚ್ಚಾದ ಸಂದರ್ಭ ಇಲ್ಲಿ ಅನಾಹುತ ಖಂಡಿತ ಆಗಲಿದೆ. ವಯನಾಡಿನಲ್ಲಿ ನಡೆದ ದುರ್ಘಟನೆಯಂತೆ ನಮ್ಮ ಕೊಡಗಿನಲ್ಲಿ ನಡೆಯುವುದು ಬೇಡ. ಆದ್ದರಿಂದ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರಲ್ಲದೆ ಇಲ್ಲಿ ಜೀವಹಾನಿ ಹಾಗೂ ಮನೆಹಾನಿ ಏನಾದರೂ ಸಂಭವಿಸಿದ್ದಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳದ ಮಾಲೀಕರು ನೇರ ಹೊಣೆಗಾರರಾಗಿರುತ್ತಾರೆ. ಕೂಡಲೇ ಇದಕ್ಕೆ ಶಾಸ್ವತವಾದ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚಾಮಿ ಗ್ರೂಪ್‌ನ ಸುರೇಶ್, ಪ್ರದೀಪ್ ರೈ, ಗೌರಿಕೆರೆ ನಿವಾಸಿ ಸಂತೋಷ್, ವಿರಾಜಪೇಟೆ ಮಂಡಲ ಅಧ್ಯಕ್ಷ ಸುವೀನ್ ಗಣಪತಿ, ಬಿಜೆಪಿಯ ಹಿರಿಯ ಮುಖಂಡ ಪಟ್ರಪಂಡ ರಘು ನಾಣಯ್ಯ ಸ್ಥಳದ ವೀಕ್ಷಣೆ ಮಾಡಿದರು.