ಸಿದ್ದಾಪುರ:ಪ್ಲೈವುಡ್ ಅಂಗಡಿಯಲ್ಲಿ ಕಳ್ಳತನ ಪ್ರಕರಣ,ಹಾಸನ ಮೂಲದ ಇಬ್ಬರ ಬಂಧನ
ಮಡಿಕೇರಿ: ಹಾಡಹಗಲೇ ಪ್ರೈವುಡ್ ಅಂಗಡಿಯಿಂದ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಹಾಸನ ಮೂಲದವರಾಗಿದ್ದು ಇವರಿಬ್ಬರು ಹಲವಾರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ.
ಸಿದ್ದಾಪುರದ ಮಡಿಕೇರಿ ರಸ್ತೆಯಲ್ಲಿರುವ ಪಿ.ಸಿ.ಪ್ರೈವುಡ್ ಅಂಗಡಿಗೆ ಮೇ 25 ರಂದು ಪೂರ್ವಾಹ್ನ 11ಗಂಟೆ ವೇಳೆಗೆ ಇಬ್ಬರು ವ್ಯಕ್ತಿಗಳು ಆಗಮಿಸಿ ತಮಗೆ ಫೈವುಡ್ ಹಾಗೂ ಮರದ ಬಿಡಿಂಗ್ ಬೇಕೆಂದು ಹೇಳಿದ್ದಾರೆ. ಇಬ್ಬರಲ್ಲಿ ಒಬ್ಬ ವ್ಯಕ್ತಿ ಅಂಗಡಿಯ ವ್ಯವಸ್ಥಾಪಕ ಅಜೀಜ್ಎಂಬವರೊಂದಿಗೆ ಅಂಗಡಿಯ ಒಳಗೆ ಹೋಗುವ ಸಂದರ್ಭ ಮತ್ತೊಬ್ಬ ಅಂಗಡಿಯ ಗಲ್ಲದ ಪೆಟ್ಟಿಗೆಯ ಕೀ ಯನ್ನು ಎಗರಿಸಿ ಗಲ್ಲದ ಪೆಟ್ಟಿಗೆಯಿಂದ ರೂ50 ಸಾವಿರ ಹಣವನ್ನು ಕಳ್ಳತನ ಮಾಡಿ ಅಂಗಡಿಯ ವ್ಯವಸ್ಥಾಪಕನ ದಿಕ್ಕು ತಪ್ಪಿಸಿ ಸ್ಕೂಟಿಯಲ್ಲಿ ಪರಾರಿಯಾಗಿದ್ದರು.
ಈ ಬಗ್ಗೆ ಅಂಗಡಿ ವ್ಯವಸ್ಥಾಪಕ ಅಜೀಜ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಕ್ಕಪಕ್ಕದ ಅಂಗಡಿಗಳ ಸಿ.ಸಿ. ಕ್ಯಾಮೆರಾಗಳಲ್ಲಿ ಪರಿಶೀಲನೆ ನಡೆಸಿದರು. ಬಳಿಕ ಆರೋಪಿಗಳ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಪೊಲೀಸರು ಹಾಸನಕ್ಕೆ ತೆರಳಿ ನಾಲ್ಕು ದಿನಗಳ ಕಾಲ ತಂಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಹಾಸನ ಮೂಲದ ಮಹಮ್ಮದ್ ಇಟ್ಬಾಲ್ (57) ಹಾಗೂ ಶಾಹಿದ್ ಅಮ್ಮದ್‌ಪಾಷ(50) ಬಂಧಿತ ಆರೋಪಿಗಳಾಗಿದ್ದಾರೆ. ಕೃತ್ಯಕ್ಕೆ ಬಳಿಸಿದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹಾಗೂ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದಾಪುರದ ಸಹಾಯಕ ಠಾಣಾಧಿಕಾರಿ ಮಂಜುನಾಥ್, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ರಾಜೇಶ್, ಪ್ರಕಾಶ್, ಮಣಿಕಂಠ, ಪಾಲ್ಗೊಂಡಿದ್ದರು.

