Kodagu

ಸಿದ್ದಾಪುರ:ಮಹಿಳೆಯ‌ ಮೇಲೆ ಮೊದಲನೆ ಗಂಡನ ಎರಡನೇ ಮಗನಿಂದ ಹಲ್ಲೆ

admincoorgdaily

AI image

ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳ ಮೊದಲನೇ ಗಂಡನ ಎರಡನೇ ಮಗ ಮತ್ತು ಇತರರು ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ ಗಾಯಗೊಳಿಸಿರುವ ಆರೋಪದಡಿಯಲ್ಲಿ 7 ಮಂದಿಯ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಚೆತಿಟ್ಟು ಗ್ರಾಮದ ನಿವಾಸಿ ಶಿವಮ್ಮ (45) ಎಂಬವರು ಕಳೆದ 15 ವರ್ಷಗಳ ಹಿಂದೆ ಪಿರಿಯಾಪಟ್ಟಣ ತಾಲೂಕಿನ ಲಾಲಾಪುರ ಗ್ರಾಮದ ನಿವಾಸಿ ಸಣ್ಣ ಎಂಬವರನ್ನು ವಿವಾಹವಾಗಿ ಬಳಿಕ ದಾಂಪತ್ಯ ಜೀವನದಲ್ಲಿ ಬಿರುಕು ಬಂದ ಹಿನ್ನೆಲೆಯಲ್ಲಿ ಇವರಿಬ್ಬರು ಪರಸ್ಪರ ಬೇರೆಯಾಗಿದ್ದರು ಎನ್ನಲಾಗಿದೆ. ಬಳಿಕ ಶಿವಮ್ಮಳು, ಮಾಲ್ದಾರೆ ಗ್ರಾಮದ ಅಂಚೆತಿಟ್ಟು ಹಾಡಿಯ ನಿವಾಸಿ ಸುರೇಶ್ ಎಂಬವರೊಂದಿಗೆ ವಾಸ ಮಾಡಿಕೊಂಡು ಅವರೊಂದಿಗೆ ಜೀವನ ಸಾಗಿಸುತ್ತಿದ್ದರು.

ತಾ 9 ರಂದು ಸಂಜೆ ಶಿವಮ್ಮಳ ಮೊದಲನೆಯ ಗಂಡನ ಎರಡನೇ ಮಗನಾದ ಸಚಿನ್ ಮತ್ತು ಇತರರು ಅಂಚೆ ತಿಟ್ಟುಗೆ ಆಗಮಿಸಿ ಶಿವಮ್ಮಳ ಮನೆಗೆ ಅಕ್ರಮ ಪ್ರವೇಶ ಮಾಡಿ ಕಬ್ಬಿಣದ ರಾಡಿನಿಂದ ಕಣ್ಣಿನ ಭಾಗಕ್ಕೆ ಹಾಗೂ ಕೈಗೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ತಡೆಯಲು ಬಂದ ಸುರೇಶನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಶಿವಮ್ಮ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಿವಮ್ಮ ನೀಡಿದ ದೂರಿನ ಮೇರೆಗೆ ಪಿರಿಯಾಪಟ್ಟಣ ತಾಲೂಕಿನ ಲಾಳಾಪುರ ಗ್ರಾಮದ ನಿವಾಸಿಗಳಾದ ಸಚಿನ್, ರೂಪ ಪ್ರೇಮ, ಪ್ರತೀಶ್, ಮಹೇಶ್, ಅಜಯ್, ನಯನ, ದಸರಾ ಹಾಗೂ ಇತರರ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.