ಸಾಮಾಜಿಕ ಜಾಲತಾಣಗಳಿಂದ ಯಾವುದೇ ವ್ಯಕ್ತಿಯ ತೇಜೋವಧೆ ಸಲ್ಲದು: ಕೊಡಗು ವಿವಿಯಲ್ಲಿ ನಡೆದ ಮಾಧ್ಯಮ ದಿನಾಚರಣೆಯಲ್ಲಿ ಶಕ್ತಿ ಸಂಪಾದಕ ಜಿ.ಚಿದ್ವಿಲಾಸ್
ಕಣಿವೆ:ಪತ್ರಕರ್ತರು ಸಮಾಜದ ಆಗುಹೋಗುಗಳ ಮೇಲೆ ಹೆಚ್ಚಿನ ಗಮನ ಹರಿಸುವ ಮೂಲಕ ಸಮಾಜದ ಕಣ್ಗಾವಲಾಗಿ ಕಾರ್ಯನಿರ್ವಹಿಸಬೇಕೆಂದು ಶಕ್ತಿ ಸಂಪಾದಕ ಜಿ.ಚಿದ್ವಿಲಾಸ್ ಕರೆಕೊಟ್ಟರು. ಕೊಡಗು ವಿಶ್ವವಿದ್ಯಾಲಯ ಹಾಗೂ ಕೊಡಗು ವಿವಿ ಹಿತರಕ್ಷಣಾ ಸಮಿತಿ ವತಿಯಿಂದ ವಿವಿಯ ಹಾರಂಗಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಕೊಡಗು ವಿವಿ ಉಳಿವಿನ ಬಗ್ಗೆ ಸರ್ಕಾರ ಇದೂವರೆಗೂ ತನ್ನ ನಿಲುವು ಪ್ರಕಟಪಡಿಸದ ಹಿನ್ನೆಲೆಯಲ್ಲಿ ಶಾಸಕರು ಈ ಬಗ್ಗೆ ವಿವಿಯೊಂದಿಗೆ ಗಟ್ಟಿಯಾಗಿ ನಿಲ್ಲುವ ಮೂಲಕ ಖಾಸಗಿ ಸಂಸ್ಥೆಗಳು ನೀಡಬಹುದಾದ ಅನುದಾನಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಸಾಮಾಜಿಕ ಜಾಲತಾಣಗಳು ಯಾವುದೇ ವ್ಯಕ್ತಿಯನ್ನು ಕಠಿನ ಶಬ್ಧಗಳಿಂದ ತೇಜೋವಧೆ ಮಾಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುವ ಕೆಲಸ ಆಗಬಾರದು. ಮಾಧ್ಯಮಗಳಿಂದಾಗಿ ಹೊಸ ಪ್ರತಿಭೆಗಳು ಹೊಸ ಚಿಂತನೆಗಳ ಉಗಮವಾಗುತ್ತಿದೆ ಎಂದು ಶ್ಲಾಘಿಸಿದರು.
ಯುವ ಜನಾಂಗ ಇಂದು ಸಮಾಜದಲ್ಲಿ ಅನೈತಿಕ ಚಟುವಟಿಕೆಗಳು ಹಾಗೂ ಕ್ರೌರ್ಯದತ್ತ ಮುಖ ಮಾಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಚಿದ್ವಿಲಾಸ್, ಮೊಬೈಲ್ ಗಳ ಬಳಕೆ ಎಲ್ಲರಿಗೂ ಜೀವನದ ಅವಿಭಾಜ್ಯ ವಾಗಿರುವ ಈ ಹೊತ್ತಿನಲ್ಲಿ ನಾವು ಹಿಂದಿನ ಪೂರ್ವಜರು ಯಾವುದೇ ದುರಾಸೆಗಳಿಗೂ ಒಳಗಾಗದೇ ಸಂತೃಪ್ತ ಬದುಕನ್ನು ಕಟ್ಟಿದ್ದನ್ನು ನಾವು ಅವಲೋಕಿಸಬೇಕಿದೆ ಎಂದು ವಿಶ್ಲೇಷಿಸಿದರು. ಡಿಜಿಟಲೀಕರಣದಿಂದಾಗಿ ಸ್ಥಳೀಯ ಪತ್ರಿಕೆಗಳಿಗೆ ಧಕ್ಕೆಯಾಗದಿದ್ದರೂ ಕೂಡ ದೊಡ್ಡ ದೊಡ್ಡ ಮುದ್ರಣ ಮಾಧ್ಯಮಕ್ಕೆ ಧಕ್ಕೆಯಾಗುತ್ತಿರುವ ಬಗ್ಗೆ ಚಿದ್ವಿಲಾಸ್ ಅವಲೋಕಿಸಿದರು. ಇಂದು ವಿದ್ಯಾರ್ಥಿಗಳು ಹಾಗೂ ಯುವಜನಾಂಗ ಐಟಿ ಕಂಪೆನಿಗಳಿಗೆ ಹೋಗುವ ಆಲೋಚನೆ ಬಿಟ್ಟು ಕೃಷಿ, ಕೋಳಿ ಸಾಕಣೆ, ಹೈನುಗಾರಿಕೆ, ಅಣಬೆ ಬೇಸಾಯ, ವ್ಯಾಪಾರ ಹಾಗೂ ಬೇರೆ ಬೇರೆ ಕಾರ್ಯಕ್ಷೇತ್ರಗಳತ್ತ ತೊಡಗಿಸಿಕೊಂಡು ಸ್ವಯಂ ಉದ್ಯೋಗ ಕಂಡುಕೊಳ್ಳಲು ಕಿವಿ ಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಮಂತರಗೌಡ ಮಾತನಾಡಿ, ಮಾಧ್ಯಮ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾಧ್ಯಮ ರಾಜಕಾರಣಿಗಳನ್ನು ಟೀಕಿಸಿದಷ್ಟು ಎಚ್ಚೆತ್ತುಕೊಳ್ಳಲು ಅನುಕೂಲವಾಗುತ್ತದೆ. ಸಾಮಾಜಿಕ ಜಾಲತಾಣಗಳಿಂದ ಪ್ರಿಂಟ್ ಮೀಡಿಯಾ ಕಳೆಗುಂದಬಾರದು. ವ್ಯವಸ್ಥೆಯ ಮೇಲಿನ ಕೆಲವು ಏರು ಪೇರುಗಳಿಗೆ ಆರೋಗ್ಯಕಾರಿ ಟೀಕೆ - ಟಿಪ್ಪಣಿಗಳು ಮಾಧ್ಯಮದಲ್ಲಿರಬೇಕು ಎಂದು ಆಶಿಸಿದ ಶಾಸಕರು ಕಾಲೇಜು ವಿದ್ಯಾರ್ಥಿಗಳು ಮುಕ್ತವಾಗಿ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಮಾಧ್ಯಮ ವೇದಿಕೆಯಾಗಬೇಕಿದೆ. ಹಾಗೆಯೇ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕೊಡಗು ವಿವಿ ಉಳಿಸುವ ಹೋರಾಟದಲ್ಲಿ ಪತ್ರಕರ್ತರ ಕಾರ್ಯವನ್ನು ಇದೇ ಸಂದರ್ಭ ಶಾಸಕರು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೊಡಗು ವಿವಿ ಹೋರಾಟದ ವಿಚಾರದಲ್ಲಿ ಕೊಡಗಿನ ಮಾಧ್ಯಮಗಳ ರಚನಾತ್ಮಕವಾದ ಹಾಗೂ ಸಾಮಾಜಿಕ ಜವಬ್ದಾರಿ ಅವಿಸ್ಮರಣೀಯ. ಮಾಧ್ಯಮ ರಂಗ ಇಂದು ಪ್ರಾಮಾಣಿಕವಾಗಿ ತನ್ನ ಕೆಲಸ ಮಾಡಿದರೆ ಸಮಾಜದ ಬದಲಾವಣೆ ಸಾಧ್ಯವಿದೆ. ಶಾಸಕಾಂಗ, ಕಾರ್ಯಾಂಗ ಒಂದಷ್ಟು ಏರು ಪೇರುಗಳಿಂದ ಕೂಡಿದ್ದು ಮಾಧ್ಯಮ ರಂಗ ಆಶಾಕಿರಣವಾಗಿ ಉಳಿದಿದೆ. ರಾಜಕಾರಣಿ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಹೊಣೆಗಾರಿಕೆಯ ಪ್ರಾಮುಖ್ಯತೆ ಪತ್ರಿಕೆಗಳದ್ದಾಗಿದೆ. ಅಭಿಪ್ರಾಯ ಮೂಡಿಸುವಷ್ಟರಮಟ್ಟಿಗೆ ಮುದ್ರಣ ಮಾಧ್ಯಮ ಅಂತಃಪ್ರಜ್ಞೆ ಹಾಗೂ ಆತ್ಮಸಾಕ್ಷಿಗೆ ಬದ್ಧವಾಗಿದ್ದು, ದೃಶ್ಯ ಮಾಧ್ಯಮಗಳು ಮಾಲೀಕನ ಅಣತಿಯಂತೆ ಸಮಾಜದ ವ್ಯಾಧಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಶಶಿಧರ್ ವಿಷಾದಿಸಿದರು. ಸಾಮಾಜಿಕ ಸನ್ನಿಯಂತಾಗಿರುವ ಇಂದಿನ ದಿನಗಳಲ್ಲಿ ಸಮಾಜವನ್ನು ಆರೋಗ್ಯಕಾರಿಯಾಗಿ ನಿರ್ಮಾಣ ಮಾಡಬೇಕಿರುವುದು ಇಂದು ಅತ್ಯಗತ್ಯವಿದೆ. ಸಿದ್ಧಾಂತ, ಆತ್ಮಸಾಕ್ಷಿಗೆ ಬದ್ಧರಾಗುವ ಮಾಧ್ಯಮ ಇಂದು ಬೇಕಿದೆ ಹೊರತು ಭೂಗತ ಪಾತಕಿಗಳನ್ನು ವೈಭವೀಕರಿಸುವ ದೃಶ್ಯ ಮಾಧ್ಯಮಗಳಲ್ಲ ಎಂದರು. ಕೊಡಗು ವಿಶ್ವವಿದ್ಯಾಲಯಕ್ಕೆ ಶಾಸಕರ ವಿವೇಚನಾ ನಿಧಿಯಿಂದ ಪೂರಕವಾದ ಗರಿಷ್ಠ ಅನುದಾನವನ್ನು ಕೊಡಬೇಕು ಎಂದು ಇದೇ ಸಂದರ್ಭ ಮನವಿ ಮಾಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ಕೊಡಗು ವಿವಿ ಕುಲಸಚಿವ ಎಂ.ಸುರೇಶ್, ಕೊಡಗು ವಿವಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಇದ್ದರು. ಉಪನ್ಯಾಸಕ ಡಾ.ಜಮೀರ್ ಅಹಮದ್ ನಿರೂಪಿಸಿ, ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಸ್ವಾಗತಿಸಿದರು. ಕೆ.ಎಸ್.ಮೂರ್ತಿ ವಂದಿಸಿದರು.