ಸೋಮವಾರಪೇಟೆ:ಛತ್ರಪತಿ ಶಾಹುಮಹಾರಾಜರ 152ನೇ ಜಯಂತಿ ಕಾರ್ಯಕ್ರಮ
ಸೋಮವಾರಪೇಟೆ: ಇತಿಹಾಸದಲ್ಲಿ ಮೊದಲ ಬಾರಿಗೆ ಬಹುಜನರಿಗೆ ಮೀಸಲಾತಿ ನೀಡಿದ ಕೀರ್ತಿ ಕೊಲ್ಲಪುರ ಸಂಸ್ಥಾನದ ಛತ್ರಪತಿ ಶಾಹು ಮಹಾರಾಜರಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಮತ್ತು ಸಾಹಿತಿಗಳಾದ ಡಾ. ಜೆ.ಸೋಮಣ್ಣ ಅಭಿಪ್ರಾಯಿಸಿದರು.
ಜಿಲ್ಲಾ ಮಹಾಬೋದಿ ಪತ್ತಿನ ಸಹಕಾರ ಸಂಘದ ವತಿಯಿಂದ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಈಚೆಗೆ ನಡೆದ ಛತ್ರಪತಿ ಶಾಹುಮಹಾರಾಜರ 152ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶತ-ಶತಮಾನಗಳಿಂದ ಅಕ್ಷರ, ಅಧಿಕಾರ, ಸಂಪತ್ತು ಮತ್ತು ಆಯುಧಗಳಿಂದ ವಂಚಿತರಾದ ಬಹುಜನರಿಗೆ 1902ರಂದು ಮೊದಲು ಮಿಸಲಾತಿಯನ್ನು ಜಾರಿ ಮಾಡಿದರು. ಅಲ್ಲಿಯ ವರೆಗೆ ಒಂದೇ ವರ್ಗದ ಜನರು ಆಡಳಿತದ ಅಧಿಕಾರವನ್ನು ಅನುಭವಿಸುತ್ತಿದ್ದರು. ಇದರಿಂದಾಗಿ ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾದ ಬಹುಜನರು ಶಿಕ್ಷಣ ಪಡದು ಅವರ ಆಡಳಿತದಲ್ಲಿ ಪಾಲುಕೊಳ್ಳುವಂತಾಯಿತು.
ಅಸ್ಪೃಶ್ಯತೆಯ ನಿಷೇಧ, ದೇವದಾಸಿ ಪದ್ದತಿ ನಿಷೇಧ, ವಿಧವ ವಿವಾಹ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಮತ್ತು ಶಾಲೆಗಳನ್ನು ಪ್ರಾರಂಭಿಸಿದರು. ಹಲವಾರು ಜನಪರ ಕಾಳಜಿಯುಳ್ಳ ಕಾನೂನುಗಳನ್ನು ಜಾರಿಗೊಳಿಸಿ ಇತಿಹಾಸದ ಪುಟದಲ್ಲಿ ದಾಖಲಾಗಿದ್ದಾರೆ ಎಂದು ಹೇಳಿದರು.
ಕೇರಳದಲ್ಲಿ ಶ್ರೀನಾರಾಯಣ ಗುರು, ತಮಿಳುನಾಡಿನಲ್ಲಿ ತಂದೆ ಪೆರಿಯಾರ್, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್, 12ನೇ ಶತಮಾನದ ಬಸವಣ್ಣ ಅವರುಗಳು ಸಮಾಜ ಪರಿವರ್ತನೆಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು. ನಮ್ಮಲ್ಲೆರ ಪೂರ್ವಿಕರ ಹೋರಾಟ, ತ್ಯಾಗದ ಫಲವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸ್ವಾತಂತ್ರ್ಯದ ನಂತರ ಸಮಸಮಾಜದ ಸಂವಿಧಾನ ರಚಿಸಿ, ದೇಶದ ಜನರೆಲ್ಲಾ ಸಮನರಾಗಿ ಬದುಕುವಂತಹ ಸಮಾಜವನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂದು ಸೋಮಣ್ಣ ನುಡಿದರು.
ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಶಾಹುಮಹಾರಾಜರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಕಾಲದ ಶೈಕ್ಷಣಿಕ ಸಾಧನೆ ಅಮೂಲ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್, ಉಪಾಧ್ಯಕ್ಷ ಗಣಪತಿ, ದಲಿತ ಹಿತರಕ್ಷಣ ಒಕ್ಕೂಟದ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಪರಿಶಿಷ್ಟಜಾತಿ-ಪಂಗಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷರಾದ ಬಿ.ಡಿ.ಸರೋಜ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ದಿವಾಕರ್, ವಕೀಲ ಜಯೇಂದ್ರ ಸಂಘದ ನಿರ್ದೇಶಕರುಗಳಾದ ಜಯಪ್ಪ ಹಾನಗಲ್, ಪ್ರೇಮ್ ಕುಮಾರ್ ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
