ಸೋಮವಾರಪೇಟೆ: ಚೌಡ್ಲು ಗ್ರಾಮದ ಅರೆಬೆಟ್ಟ ಪ್ರದೇಶದಲ್ಲಿ ಚಿರತೆ ದಾಳಿಗೆ ನಾಲ್ಕು ಆಡು ಬಲಿ
admincoorgdaily

ಸೋಮವಾರಪೇಟೆ: ತಾಲೂಕಿನ ಸಮೀಪದ ಚೌಡ್ಲು ಗ್ರಾಮದ ಅರೆಬೆಟ್ಟ ಪ್ರದೇಶದಲ್ಲಿ ಹಾಡುಹಗಲೇ ಚಿರತೆ ದಾಳಿ ನಡೆಸಿ ಮೇಯಲು ಕಟ್ಟಿದ್ದ ನಾಲ್ಕು ಆಡುಗಳನ್ನು ಕೊಂದು ತಿಂದಿರುವ ಘಟನೆ ಶುಕ್ರವಾರ ನಡೆದಿದೆ. ಚೌಡ್ಲು ಗ್ರಾಮದ ಅರೆಬೆಟ್ಟ ನಿವಾಸಿ ದೇವರಾಜು ಅವರಿಗೆ ಸೇರಿದ ಎರಡು ಗಂಡು ಹಾಗೂ ಎರಡು ಹೆಣ್ಣು ಗರ್ಭಿಣಿ ಆಡುಗಳನ್ನು ತಮ್ಮ ಹೊಲದಲ್ಲಿ ಮೇಯಲು ಬಿಟ್ಟಿದ್ದ ವೇಳೆ ಏಕಾಏಕಿ ಚಿರತೆ ದಾಳಿ ನಡೆಸಿದೆ.
ದಾಳಿಯ ತೀವ್ರತೆಗೆ ನಾಲ್ಕು ಆಡುಗಳೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಲವು ಭಾಗಗಳನ್ನು ಚಿರತೆ ತಿಂದಿರುವುದು ಕಂಡುಬಂದಿದೆ. ಘಟನೆಯಿಂದ ಆಡು ಸಾಕಾಣಿಕೆ ನಡೆಸುತ್ತಿದ್ದ ದೇವರಾಜು ಅವರಿಗೆ ಭಾರೀ ನಷ್ಟ ಉಂಟಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಟದ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದು, ಇದೀಗ ನಡೆದ ದಾಳಿಯಿಂದ ಭಯ ಮತ್ತಷ್ಟು ಹೆಚ್ಚಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಳಿ ನಡೆಸಿದ ವನ್ಯಮೃಗವನ್ನು ಪತ್ತೆಹಚ್ಚಿ ಸೆರೆ ಹಿಡಿಯಲು ಶೀಘ್ರದಲ್ಲೇ ಬೋನ್ ಅಳವಡಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.
ಅಲ್ಲದೆ, ಮೃತಪಟ್ಟ ಆಡುಗಳ ಮಾಲೀಕರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಸ್ಥಳಕ್ಕೆ ಅರಣ್ಯ ಡಿ.ಆರ್.ಎಫ್.ಒ ಪ್ರಶಾಂತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ಮಹೇಶ್ ತಿಮ್ಮಯ್ಯ, ಮಂಜುನಾಥ್, ಮೋಹನ್ ಸೇರಿದಂತೆ ಸ್ಥಳೀಯರು ಇದ್ದರು. ಚಿರತೆಯನ್ನು ಶೀಘ್ರ ಸೆರೆ ಹಿಡಿದು ಗ್ರಾಮಸ್ಥರ ಆತಂಕ ನಿವಾರಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.