ಸೋಮವಾರಪೇಟೆ : ಮುಂಗಾರು-ಬೆಳೆ ಸಮೀಕ್ಷೆ ಕಡ್ಡಾಯ
admincoorgdaily

ಮಡಿಕೇರಿ:-ಪ್ರಸಕ್ತ (2026-27) ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಪ್ರಾರಂಭಗೊಂಡಿದ್ದು ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರಗಳನ್ನು ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ದಾಖಲಿಸುವಂತೆ ಕೋರಲಾಗಿದೆ.
ಸರಕಾರವು ಬೆಳೆ ಸಮೀಕ್ಷೆ ಮೂಲಕ ರೈತರ ಜಮೀನಿನಲ್ಲಿರುವ ವಿವಿಧ ಬೆಳೆಗಳ ವಿಸ್ತೀರ್ಣ, ಬೆಳೆ ವಿವರ ಸಹಿತ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದೆ. ಈ ಸಾಲಿನಲ್ಲಿಯೂ ರೈತರು ಸ್ವತ: ಬೆಳೆ ಸಮೀಕ್ಷೆಯಲ್ಲಿ ನೇರವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಇದರಿಂದ ರೈತರು ತಮ್ಮ ಬೆಳೆಯ ನಿಖರ ಮಾಹಿತಿಯನ್ನು ತಾವೇ ದಾಖಲಿಸಬಹುದಾಗಿದೆ.
ಬೆಳೆ ಸಮೀಕ್ಷೆ ಆಪ್ ಮೂಲಕ ವಿವರ ದಾಖಲಿಸುವುದು: ರೈತರು ತಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ತೆರಳಿ ಮುಂಗಾರು ರೈತರ ಬೆಳೆ ಸಮೀಕ್ಷೆ 2026 ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರ ತೆಗೆದು ಬೆಳೆಗಳ ವಿವರಗಳೊಂದಿಗೆ ಆಪ್ ನಲ್ಲಿ ಅಪೆÇ್ಲೀಡ್ ಮಾಡಬಹುದಾಗಿದೆ ಇದು ಸಾಧ್ಯವಾಗದಿದ್ದಲ್ಲಿ ತಾಲೂಕು ಆಡಳಿತ ನೇಮಿಸಿರುವ ಮೊಬೈಲ್ ತಂತ್ರಾಂಶದ ಜ್ಞಾನ ಹೊಂದಿರುವ ಸ್ಥಳೀಯ ಖಾಸಗಿ ನಿವಾಸಿಗಳ ನೆರವು ಪಡೆಯಬಹುದಾಗಿದೆ.
ತಾಲೂಕು ಆಡಳಿತದಿಂದ ಪರಿಶೀಲನೆ: ರೈತರು ಅಥವಾ ನೇಮಕಗೊಂಡ ಖಾಸಗಿ ನಿವಾಸಿಗಳು ಛಾಯಾಚಿತ್ರದೊಂದಿಗೆ ದಾಖಲಿಸಿರುವ ಬೆಳೆ ಮಾಹಿತಿಯನ್ನು ತಾಲೂಕು ಆಡಳಿತ ಪರಿಶೀಲಿಸಿ ಅನುಮೋದಿಸಲಿದೆ ತದನಂತರ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಸಮೀಕ್ಷೆ ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ. ಈ ಮಾಹಿತಿಯು ಬೆಳೆ ಸಮೀಕ್ಷೆಯಲ್ಲಿ ವ್ಯತ್ಯಾಸವಿದ್ದಲ್ಲಿ ಬೆಳೆ ದರ್ಶಕ ಮೊಬೈಲ್ ಆಪ್ ಮೂಲಕ ರೈತರು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಈ ಮೂಲಕ ತಮ್ಮ ಜಮೀನಿನ ಬೆಳೆ ಮಾಹಿತಿಯು ಸರಕಾರದ ದಾಖಲಾತಿಗಳಲ್ಲಿ ನಮೂದಾಗುವಂತೆ ಖಚಿತ ಪಡಿಸಿಕೊಳ್ಳಬಹುದಾಗಿದೆ.
ಯಾವ ಯಾವ ಯೋಜನೆಗೆ ಬೆಳೆ ಸಮೀಕ್ಷೆ ಪ್ರಯೋಜನವಾಗಲಿದೆ: ಪ್ರಸಕ್ತ ಸಾಲಿನಲ್ಲಿ ಬೆಳೆ ಸಮೀಕ್ಷೆ ಮಾಡಿಸದ ರೈತರಿಗೆ ಬೆಳೆ ವಿಮೆ ಯೋಜನೆಯ ಫಲಾನುಭವಿಯಾಗಲು ಅರ್ಹತೆ ಇರುವುದಿಲ್ಲ. ಬೆಳೆ ವಿಮೆ ಯೋಜನೆ ಅಡಿ ನೋಂದಣಿ ಯಾಗಿರುವ ರೈತರು ಸ್ವತಹ ಬೆಳೆ ಸಮೀಕ್ಷೆ ನಡೆಸಿ ತಮ್ಮ ಬೆಳೆಯ ವಿವರ ದಾಖಲಿಸುವುದರಿಂದ ಮುಂದೆ ಬೆಳೆವಿಮೆ ಪಡೆಯುವ ಪ್ರಕ್ರಿಯೆಯಲ್ಲಿಯೂ ಸಹಕಾರಿಯಾಗಲಿದೆ.
ರೈತರು ಬೆಳೆದಿರುವ ಬೆಳೆಗಳು ಪಹಣಿಯಲ್ಲಿ ನಮೂದಿಸಲು, ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರದಿಂದ ದೊರೆಯುವ ಪರಿಹಾರ ಹಣ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿರುತ್ತದೆ. ಬೆಳೆ ಬೆಳೆದು ಫಸಲನ್ನು ಸರಕಾರಿ ಖರೀದಿ ಕೇಂದ್ರಕ್ಕೆ ನೀಡಲು ಹಾಗೂ ಬೆಳೆ ಸಾಲ ಪಡೆಯಲು ಬೆಳೆ ಸಮೀಕ್ಷೆ ವರದಿ ಕಡ್ಡಾಯವಾಗಿದೆ.
ಆದ ಕಾರಣ ಎಲ್ಲಾ ರೈತ ಬಾಂಧವರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಸೋಮವಾರಪೇಟೆ/ ಕುಶಾಲನಗರ ಸಹಾಯಕ ಕೃಷಿ ನಿರ್ದೇಶಕರಾದ ವೀರಣ್ಣ ಕೆ.ಪಿ. ಅವರು ರೈತರಲ್ಲಿ ಮನವಿ ಮಾಡಿದ್ದಾರೆ.