ಕೊಡಗು: 5864 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಹಾಗೂ ನಾಟಿ ಕಾರ್ಯ ಪೂರ್ಣ

ಕೊಡಗು: 5864 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಹಾಗೂ  ನಾಟಿ ಕಾರ್ಯ ಪೂರ್ಣ

ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳ ಬಿತ್ತನೆ ಕಾರ್ಯಗಳು ಪ್ರಗತಿಯಲ್ಲಿವೆ. ಒಟ್ಟು 30525 ಹೆಕ್ಟೇರ್‌ ಗುರಿಗೆ ಇಲ್ಲಿಯವರೆಗೆ 5864 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ/ ನಾಟಿ ಕಾರ್ಯ ಪೂರ್ಣಗೊಂಡಿರುತ್ತದೆ ಎಂದು ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಾಫಿ ಬೆಳೆಗಳಿಗೆ 2025 ನೇ ಸಾಲಿನ ಮುಂಗಾರು ಹಂಗಾಮಿಗೆ ಸುಮಾರು 88677 ಮೆ. ಟನ್‌ ರಸಗೊಬ್ಬರಗಳ ಅವಶ್ಯಕತೆ ಇದೆಯೆಂದು ಅಂದಾಜಿಸಲಾಗಿದೆ. ಏಪ್ರಿಲ್‌ ಮಾಹೆಯ ಆರಂಭಿಕ ದಾಸ್ತಾನು (ಕಾಪು ದಾಸ್ತಾನು ಸೇರಿ) 35,924 ಮೆ. ಟನ್‌ ಇದ್ದು, ದಿನಾಂಕ 28.07.2025 ರವರೆಗೆ 54520 ಮೆ. ಟನ್‌ ರಸಗೊಬ್ಬರ ವಿವಿಧ ತಯಾರಕ ಸಂಸ್ಥೆಗಳಿಂದ ಜಿಲ್ಲೆಗೆ ಸರಬರಾಜಾಗಿರುತ್ತದೆ. ಒಟ್ಟಾರೆಯಾಗಿ ಇಲ್ಲಿಯವರೆಗೆ 90,444 ಮೆ. ಟನ್‌ ರಸಗೊಬ್ಬರ ಜಿಲ್ಲೆಯ ರೈತರಿಗೆ ಲಭ್ಯವಿದ್ದು, ಸುಮಾರು 60,126 ಮೆ. ಟನ್‌ ರಸಗೊಬ್ಬರವನ್ನು ರೈತರಿಗೆ ವಿತರಣೆ/ ಮಾರಾಟ ಮಾಡಲಾಗಿದೆ. ಬಾಕಿ 30,318 ಮೆ. ಟನ್‌ ರಸಗೊಬ್ಬರ (ಯೂರಿಯಾ – 5855 ಮೆ ಟನ್‌, ಡಿ ಎ ಪಿ – 1643 ಮೆ ಟನ್‌, ಎಂ ಓ ಪಿ – 5526 ಮೆ ಟನ್‌, NPK ಕಾಂಪ್ಲೆಕ್ಸ್‌ - 16250 ಮೆ ಟನ್‌ ಹಾಗೂ ಎಸ್‌ ಎಸ್‌ ಪಿ – 1043 ಮೆ ಟನ್) ಹಾಲಿ ದಾಸ್ತಾನಿದ್ದು, ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರಗಳ ಕೊರತೆಯಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರಗಳ ಲಭ್ಯತೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಕೊಡಗು ಜಿಲ್ಲೆ ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.