ಐಕ್ಯತೆ ಮೂಡಿಸುವ ಶಕ್ತಿ ಕ್ರೀಡೆಗಿದೆ; ಪ್ರೊ. ಮೇ. ಬಿ. ರಾಘವ: ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಗೆ ಚಾಲನೆ

Mar 23, 2026 - 11:42
 0  152
ಐಕ್ಯತೆ ಮೂಡಿಸುವ ಶಕ್ತಿ ಕ್ರೀಡೆಗಿದೆ; ಪ್ರೊ. ಮೇ. ಬಿ. ರಾಘವ:  ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಗೆ ಚಾಲನೆ

ಮಡಿಕೇರಿ: ದೇಶದ ಪ್ರಗತಿ ಹಾಗೂ ಐಕ್ಯತೆ ಮೂಡಿಸುವ ಶಕ್ತಿ ಕ್ರೀಡೆಗಿದೆ ಎಂದು ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಪ್ರೊ. ಮೇ. ಬಿ. ರಾಘವ ಅಭಿಮತ ವ್ಯಕ್ತಪಡಿಸಿದರು. ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ನಾಲ್ಕನೇ ವರ್ಷದ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

 ಮೋಜು-ಮಸ್ತಿಗಾಗಿ ಆರಂಭವಾದ ಕ್ರಿಕೆಟ್ ಕ್ರಮೇಣ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡು ಇಂದು ಎಲ್ಲಾ ವಯೋಮಾನದವರನ್ನು ಸೆಳೆಯುತ್ತಿದೆ. ಶಿಸ್ತುಬದ್ಧ ಆಟವಾಗಿ ಜನಪ್ರಿಯಗೊಂಡಿರುವ ಕ್ರಿಕೆಟ್ ಭಾರತದಲ್ಲೂ ಛಾಪು ಮೂಡಿಸಿದೆ ಎಂದರು. ಕ್ರೀಡಾ ಕ್ಷೇತ್ರದಲ್ಲಿ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ. ಕೋಟ್ಯಂತರ ರೂಪಾಯಿ ಹಣ, ಗೌರವ ಆಟಗಾರರಿಗೆ ದೊರೆಯುತ್ತಿದೆ.

 ಕ್ರಿಕೆಟ್ ನಾಯಕತ್ವ ಗುಣ, ಕೌಶಲ್ಯವನ್ನು ವೃದ್ಧಿಸುತ್ತದೆ. ಮಾನಸಿಕ ಒತ್ತಡ ನಿಭಾಯಿಸುವ ಶಕ್ತಿ ಕ್ರೀಡೆ ನೀಡುತ್ತದೆ. ತಾಳ್ಮೆ, ಸದೃಢತೆ ಸಾಧಿಸಿದರೆ ಎಲ್ಲ ರೀತಿಯ ಒತ್ತಡ ನಿಭಾಯಿಸಬಹುದು. ದೇಶದ ಪ್ರಗತಿಯಲ್ಲಿ ಕ್ರೀಡೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಐಕ್ಯತೆಗೂ ಕಾರಣವಾಗಿದೆ ಎಂದರು.

ಉದ್ಯಮಿ ಶಾಹೀರ್ ಮಾತನಾಡಿ, ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ವೃದ್ಧಿಗೆ ಸಹಕಾರಿ ಎಂದರು. ಕಾಂಗ್ರೆಸ್ ಮುಖಂಡ, ಉದ್ಯಮಿ ವಿ.ಜಿ. ಮೋಹನ್ ಗೌಡ ಮಾತನಾಡಿ, ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ಒತ್ತಡದಲ್ಲಿರುತ್ತಾರೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನೋಲ್ಲಾಸ ಮೂಡಿ ಸದೃಢರಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕ್ರಿಕೆಟ್ ಕೇವಲ ಆಟವಲ್ಲ. ಒಂದಾಗಲು ವೇದಿಕೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ ಮಾತನಾಡಿ, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಗುಣ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

 ಉದ್ಯಮಿ ಖಲೀಲ್ ಬಾಷ ಮಾತನಾಡಿ, ಪ್ರಪಂಚದಲ್ಲಿ ನಡೆಯುವ ವಿದ್ಯಮಾನಗಳನ್ನು ತಿಳಿಸುವ ಪತ್ರಕರ್ತರು ಸಂಘಟಿತರಾಗಿ ಆಟೋಟದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು.

 ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ ಮಾತನಾಡಿದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಒ ಅಧ್ಯಕ್ಷತೆ ವಹಿಸಿದ್ದರು‌. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಉಪಸ್ಥಿತರಿದ್ದರು. ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ನವೀನ್ ಡಿಸೋಜ ಸ್ವಾಗತಿಸಿ, ಸದಸ್ಯ ಚನ್ನನಾಯಕ ಪ್ರಾರ್ಥಿಸಿ, ಹೆಚ್.ಜೆ. ರಾಕೇಶ್ ನಿರೂಪಿಸಿ, ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0