ಬಿಟ್ಟಂಗಾಲದ ಅಂಬಟ್ಟಿಯಲ್ಲಿ ಸೆಪ್ಟೆಂಬರ್ 6 ರಂದು ಶ್ರೀ ನಾರಾಯಣ ಗುರು ಜಯಂತಿ, ವಿಶೇಷ ಉಪನ್ಯಾಸ ಹಾಗೂ ಪ್ರತಿಭಾ ಪುರಸ್ಕಾರ
admincoorgdaily

ವಿರಾಜಪೇಟೆ: ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ಬಿಟ್ಟಂಗಾಲದ ಅಂಬಟ್ಟಿಯಲ್ಲಿರುವ ಶ್ರೀ ನಾರಾಯಣ ಗುರು ಮಂದಿರದಲ್ಲಿ ಸೆಪ್ಟೆಂಬರ್ 6, 2026 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ 'ಶ್ರೀ ನಾರಾಯಣ ಗುರು ಜಯಂತಿ', ವಿಶೇಷ ಉಪನ್ಯಾಸ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ. ಗಣೇಶ್ ಹೇಳಿದರು.
ಈ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಧ್ಯಕ್ಷ ಗಣೇಶ್ ಅವರು ಸಾಮಾನ್ಯ ದಿನಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ ಶಾಲಾ-ಕಾಲೇಜುಗಳ ಕಾರಣಕ್ಕೆ ಪ್ರತಿಭಾ ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳು ಹಾಗೂ ಜನಾಂಗದ ಬಾಂಧವರು ಪಾಲ್ಗೊಳ್ಳಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸೆಪ್ಟೆಂಬರ್ 6 ರ ಭಾನುವಾರದಂದು ದಿನಾಂಕವನ್ನು ನಿಗದಿಪಡಿಸಲಾಗಿದೆ. ಆಗಸ್ಟ್ 28ರಂದು ನಾರಾಯಣ ಗುರು ಜಯಂತಿ ಆಚರಣೆ ಇದ್ದು, ಆ ದಿನ ಸಂಘದವರು ಸೇರಿ ಪೂಜೆ ನಡೆಸುತ್ತೇವೆ. ಕಾರ್ಯಕ್ರಮವನ್ನು ಸೆ.6 ರಂದು ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಅಂದು ಬೆಳಿಗ್ಗೆ 10 ಗಂಟೆಗೆ ಸಂಘದ ಸರ್ವ ಸದಸ್ಯರು ಹಾಗೂ ಜನಾಂಗದ ಬಾಂಧವರು ಸೇರಿ ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಭಕ್ತಿ-ಶ್ರದ್ಧೆಯಿಂದ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.
10.30 ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಈ ವೇಳೆ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಲಿದೆ. ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವಂತೆ ಈ ಬಾರಿಯೂ ಶ್ರದ್ಧಾ-ಭಕ್ತಿಗಳಿಂದ ಜಯಂತಿ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಜೀವನ, ತತ್ವ ಸಿದ್ಧಾಂತ ಹಾಗೂ ಅವರು ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ಹೇಗೆ ತೊಡೆದುಹಾಕಿದರು ಎಂಬುದರ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸಲಿರುವ ವಿಶೇಷ ಉಪನ್ಯಾಸಕರಾದ ಸ್ಮಿತೇಶ್ ಅವರು ಜನಾಂಗದ ಬಾಂಧವರಿಗೆ ಚಿಂತನ-ಮmಥನ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿಭಾ ಪುರಸ್ಕಾರಕ್ಕೆ ಆ. 20 ಕೊನೆಯ ದಿನಾಂಕ:
ಸಂಘದ ಪ್ರತಿವರ್ಷದ ಪರಂಪರೆಯಂತೆ ವಿರಾಜಪೇಟೆ ಬಿಲ್ಲವ ಸೇವಾ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆದ ಜನಾಂಗದ ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಯ ಅಂಕಪಟ್ಟಿ ಆಧಾರ್ ಕಾರ್ಡ್ ಹಾಗೂ 1 ಪಾಸ್‌ಪೋರ್ಟ್ ಸೈಜ್ ಭಾವಚಿತ್ರವನ್ನು ಕಳುಹಿಸಬೇಕು.
ದಾಖಲೆ ಸಲ್ಲಿಸಲು ಆಗಸ್ಟ್ 20 ಕೊನೆಯ ದಿನವಾಗಿದ್ದು, ಜನಾರ್ಧನ್ ಪೂಜಾರಿ: 96110 02998, ಗಣೇಶ್ ಪೂಜಾರಿ 99455 26358 ವಾಟ್ಸಾಪ್ ಸಂಖ್ಯೆಗಳಿಗೆ ಕಳುಹಿಸುವಂತೆ ತಿಳಿಸಿದರು. ಉಪಾಧ್ಯಕ್ಷರಾದ ಪುರುಶೋತ್ತಮ ಮಾತನಾಡಿ, ಕಾರ್ಯಕ್ರಮದಲ್ಲಿ ಬಿಲ್ಲವ ಜನಾಂಗದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಈ ಸಂದರ್ಭ ಕಾರ್ಯದರ್ಶಿ ಜನಾರ್ಧನ, ನಿರ್ದೇಶಕರುಗಳಾದ ನಾರಾಯಣ ಪೂಜಾರಿ, ಕಿಶೋರ್ ಪೂಜಾರಿ, ಹರೀಶ್ ಉಪಸ್ಥಿತರಿದ್ದರು.