CRIME

ಮದುವೆಯಾಗು ಅಂದಿದ್ದಕ್ಕೆ ಪ್ರಿಯಕರನಿಂದ ಹತ್ಯೆ : ಸ್ಟಾಫ್ ನರ್ಸ್ ಕತ್ತು ಸೀಳಿ ಕೊಲೆ

admincoorgdaily

Photo credit: TV09

ಬೆಂಗಳೂರು, ಡಿ.26: ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಕೋಪಗೊಂಡ ಪ್ರಿಯಕರನೇ ಸ್ಟಾಫ್ ನರ್ಸ್‌ರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಡಿಸೆಂಬರ್ 24ರ ರಾತ್ರಿ ನಲ್ಲಿ ಈ ಕೃತ್ಯ ನಡೆದಿದ್ದು, 25ರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಹತ್ಯೆಗೀಡಾದವರನ್ನು ಮಮತಾ (39)ಎಂದು ಗುರುತಿಸಲಾಗಿದೆ. ಅವರು ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಸ್ನೇಹಿತೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಡಿಸೆಂಬರ್ 24ರಂದು ಸ್ನೇಹಿತೆ ಊರಿಗೆ ತೆರಳಿದ್ದರಿಂದ ಮಮತಾ ರಾತ್ರಿ ಒಬ್ಬರೇ ಮನೆಯಲ್ಲಿದ್ದರು. ಈ ಸಂದರ್ಭ ಮನೆಗೆ ಬಂದ ಪ್ರಿಯಕರ ಸುಧಾಕರ್ ಕತ್ತು ಸೀಳಿ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

25ರ ಬೆಳಗ್ಗೆ ಮನೆಗೆ ಬಂದ ಪರಿಚಿತರಿಗೆ ಮಮತಾ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದರಿಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು. ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸ್ ತನಿಖೆಯ ಪ್ರಕಾರ, ಮಮತಾ ಮತ್ತು ಸುಧಾಕರ್ ಕಳೆದ ಒಂದು ವರ್ಷದಿಂದ ಪರಸ್ಪರ ಪರಿಚಯ ಹಾಗೂ ಪ್ರೀತಿಯಲ್ಲಿದ್ದರು. ಇತ್ತೀಚೆಗೆ ಸುಧಾಕರ್‌ಗೆ ಕುಟುಂಬಸ್ಥರು ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ನಿಶ್ಚಯಿಸಿದ್ದರು. ಈ ವಿಷಯ ತಿಳಿದ ಮಮತಾ, ತನ್ನನ್ನೇ ಮದುವೆಯಾಗಬೇಕೆಂದು ಒತ್ತಾಯಿಸಿದ್ದಲ್ಲದೆ, ಬೇರೆ ಮದುವೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.

 ಸುಧಾಕರ್, ಮಮತಾ ಒಬ್ಬರೇ ಇರುವುದನ್ನು ಗಮನಿಸಿ ಮನೆಗೆ ತೆರಳಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹತ್ಯೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.