ನಾಗರಹೊಳೆ ಮತ್ತು ಬಂಡೀಪುರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಫಾರಿ ಆರಂಭಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರ

Jun 27, 2026 - 15:38
 0  281
ನಾಗರಹೊಳೆ ಮತ್ತು ಬಂಡೀಪುರದಲ್ಲಿ  ಪೂರ್ಣ ಪ್ರಮಾಣದಲ್ಲಿ ಸಫಾರಿ ಆರಂಭಕ್ಕೆ  ಅನುಮತಿ ನೀಡಿದ ರಾಜ್ಯ ಸರ್ಕಾರ

ಕೋವರ್‌ ಕೊಲ್ಲಿ ಇಂದ್ರೇಶ್‌

ಬೆಂಗಳೂರು : ಕಳೆದ ಕೆಲ ತಿಂಗಳುಗಳಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದ ಸಫಾರಿ ಪುನರಾರಂಭಕ್ಕೆ ಸರ್ಕಾರ ನಿರ್ಧರಿಸಿದೆ. ತಜ್ಞರು, ಅಧಿಕಾರಿಗಳ ತಾಂತ್ರಿಕ ಸಮಿತಿ ವರದಿ ಅನ್ವಯ ಕ್ರಮ ಕೈಗೊಳ್ಳಲಾಗಿದ್ದು, ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾಗಣೆ ಸಾಮರ್ಥ್ಯ ಆಧರಿಸಿ ಹಸಿರು ನಿಶಾನೆ ನೀಡಲಾಗಿದೆ. ಈ ನಿರ್ಧಾರಿಂದ ಸ್ಥಳೀಯ ಉದ್ಯೋಗ, ಆರ್ಥಿಕತೆ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಸಮಿತಿಯ ಶಿಫಾರಸಿನ ಪ್ರಕಾರ ನಿಯಂತ್ರಿತ ರೀತಿಯಲ್ಲಿ ಜಂಗಲ್ ಸಫಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯು ಶುಕ್ರವಾರ ಮಾಹಿತಿ ನೀಡಿದೆ.

             ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು 2025ರ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ 2026ರ ಫೆಬ್ರವರಿ 19ರಿಂದ ಶೇ.50ರ ಸಾಮರ್ಥ್ಯದಲ್ಲಿ ಮತ್ತು ಕಡಿಮೆ ಅವಧಿಯೊಂದಿಗೆ ಸಫಾರಿ ಪುನರಾರಂಭಕ್ಕೆ ಸರ್ಕಾರ ಅವಕಾಶ ನೀಡಿತ್ತು. ಸಫಾರಿ ತಾತ್ಕಾಲಿಕ ಸ್ಥಗಿತವಾದ ನಂತರ ರಚನೆ ಮಾಡಲಾಗಿದ್ದ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದ್ದು, ಈ ಸಂಬಂಧ ಜನವರಿ 2ರಂದು ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚೆ ಮಾಡಲಾಗಿತ್ತು. ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇರುವ ಕಾರಣ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಅಂದಿನ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದರು.

                      ಈ ಹಿಂದೆ ನೀಡಿದ್ದ ಶೇಕಡಾ 50 ರ ಸಾಮರ್ಥ್ಯದ ಅನುಮತಿಯಲ್ಲಿ ಸಫಾರಿಗೆ ಈ ಮೊದಲು ಬಳಕೆ ಮಾಡಲಾಗುತಿದ್ದ ವಾಹನಗಳ ಸಂಖ್ಯೆಯಲ್ಲಿ ಶೇ.50ರಷ್ಟು ವಾಹನಗಳನ್ನು ಕಡಿತ ಮಾಡಲಾಗಿದ್ದು ನಿರ್ದಿಷ್ಟ ಸಂಖ್ಯೆಯ ವಾಹನಗಳ ಬಳಕೆಗೆ ಮಾತ್ರ ಅವಕಾಶ ನೀಡುವ ಜೊತೆಗೆ, ಬಂಡೀಪುರದಲ್ಲಿ ಸಫಾರಿ ಅವಧಿಯನ್ನು 8 ಗಂಟೆಯಿಂದ 5ಕ್ಕೆ ಅವಧಿ ಇಳಿಕೆ ಮಾಡಲಾಗಿತ್ತು. ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿತ್ತು. ಆದರೀಗ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು ಮೊದಲಿನಂತೆ ಪೂರ್ಣ ಪ್ರಮಾಣದ ಸಫಾರಿಗೆ ಅವಕಾಶ ನೀಡಿರುವುದು ವನ್ಯಜೀವಿ ಪ್ರಿಯರಿಗೆ ಹರ್ಷ ತಂದಿದೆ.

ಸಫಾರಿ ನಿಷೇಧದಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಾಂತರ ರೂಪಾಯಿಗಳ ಆದಾಯ ನಷ್ಟ ಉಂಟಾಗಿತ್ತು. ಹುಲಿ ಹಾಗೂ ಚಿರತೆ ದಾಳಿಯಿಂದ ರಾಜ್ಯದ ಹಲವೆಡೆ ಸಾವು ನೋವುಗಳು ಹೆಚ್ಚಾದ ಹಿನ್ನೆಲೆ ಸರ್ಕಾರ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿತ್ತು. ಇದರ ಪರಿಣಾಮವಾಗಿ ಸಫಾರಿ ಪ್ರಿಯ ಪ್ರವಾಸಿಗರು ಕೇರಳ ಮತ್ತು ತಮಿಳುನಾಡು ರಾಜ್ಯಗಳ ಸಫಾರಿ ಅರಣ್ಯಕ್ಕೆ ಹೋಗುತಿದ್ದರು.

ಇಲ್ಲಿ ನಿರ್ಭಂಧ ಹೇರಿದ ಕಾರಣಕ್ಕಾಗಿ ಉತ್ತರ ಭಾರತದ ರಣಥಂಬೋರ್ ಹಾಗೂ ಜಿಮ್‌ ಕಾರ್ಬೆಟ್ ಸೇರಿದಂತೆ ಇತರ ರಾಜ್ಯಗಳ ಉದ್ಯಾನವನಗಳಲ್ಲಿ ಸಫಾರಿ ಬುಕ್ಕಿಂಗ್ ಹೆಚ್ಚಾಗಿದೆ ಎಂದು ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಶನ್ (KETRA) ದೂರಿತ್ತು. ಅಲ್ಲದೆ ಬಂಡೀಪುರ-ನಾಗರಹೊಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 35 ರಿಸಾರ್ಟ್‌ ಗಳಿಗೆ ದಿನಕ್ಕೆ ಸರಾಸರಿ 3 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಸುಮಾರು 8,000 ಜನರು ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದು, ಸಫಾರಿಗೆ ಬ್ರೇಕ್ ಬಿದ್ದಿರುವುದು ಇವರ ಜೀವನದ ಮೇಲೆ ಪರಿಣಾಮ ಬೀರಿದೆ ಎಂಬ ಬಗ್ಗೆ ವರದಿಯಾಗಿತ್ತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0