ಆಗಸ್ಟ್ 22ರಂದು ಭಾಗಮಂಡಲದಲ್ಲಿ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ
admincoorgdaily

ಮಡಿಕೇರಿ: ೩೪ನೇ ರಾಜ್ಯಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಆ.೨೨ ರಂದು ಭಾಗಮಂಡಲದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಯುವ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲೂಕು ಯುವ ಒಕ್ಕೂಟ, ಶ್ರೀ ಕೃಷ್ಣ ಯೂತ್ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದೆ. ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ ಇದೆ. ಪ್ರಾಥಮಿಕದಿಂದ ಪದವಿ ಪೂರ್ವದವರೆಗೆ ಬಾಲಕ-ಬಾಲಕಿಯರ ಓಟ, ಸಾರ್ವಜನಿಕರಿಗೆ ಮುಕ್ತ ಓಟ, ಆಯೋಜಕರ ಓಟ ನಡೆಯಲಿದೆ ಎಂದು ತಿಳಿಸಿದ್ದಾರೆ. ಬೆಳಗ್ಗೆ ೯ಕ್ಕೆ ಉಸ್ತುವಾರಿ ಸಚಿವ ನರೇಂದ್ರಸ್ವಾಮಿ ಚಾಲನೆ ನೀಡಲಿದ್ದಾರೆ.
ಶಾಸಕ ಮಂತರ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೬ಕ್ಕೆ ಸಮಾರೋಪದಲ್ಲಿ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಯದುವೀರ್ ಒಡೆಯರ್, ಅಜಯ್ ಮಾಕನ್ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೬೩೬೧೬೨೧೬೪೩ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶ್ರೀ ಕೃಷ್ಣ ಯೂತ್ ಕ್ಲಬ್ ಗೌರವ ಅಧ್ಯಕ್ಷ ಜೀವನ್ ಕುಮಾರ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಲಾಡಿ ದಿಲೀಪ್ ಕುಮಾರ್, ಅಭಿಷೇಕ್, ಮಂಜು ಇದ್ದರು.