ಕೂಡಿಗೆ ಅಂಜೆಲಾ‌ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ಮಕ್ಕಳಿಗೆ ವಾಸ್ತವ್ಯ, ಬೇಸಿಗೆ ಶಿಬಿರ

Apr 12, 2026 - 18:32
 0  296
ಕೂಡಿಗೆ ಅಂಜೆಲಾ‌  ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್  ಮಕ್ಕಳಿಗೆ ವಾಸ್ತವ್ಯ, ಬೇಸಿಗೆ ಶಿಬಿರ

ಕೂಡಿಗೆ/ಕುಶಾಲನಗರ, ಏ.12: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಶಿಸ್ತು- ಸಂಯಮ, ಉತ್ತಮ ನಾಯಕತ್ವ ಗುಣ, ರಾಷ್ಟ್ರೀಯ ಭಾವೈಕ್ಯತೆ, ಸೌಹಾರ್ದ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ‌ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ ಹೇಳಿದರು.

ಕುಶಾಲನಗರ ತಾಲ್ಲೂಕಿನ‌ ಕೂಡಿಗೆ ಅಂಜೆಲಾ‌ ವಿದ್ಯಾನಿಕೇತನ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ ಹಾಗೂ ಅಂಜೆಲಾ‌ ವಿದ್ಯಾನಿಕೇತನ ಶಾಲೆಯ ಸಂಯುಕ್ತಾಶ್ರಯದಲ್ಲಿ‌ ಶಾಲೆಯ ಕಬ್ಸ್ ಮತ್ತು ಬುಲ್ ಬುಲ್ಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಾಸ್ತವ್ಯ ಬೇಸಿಗೆ ಶಿಬಿರದ ಉದ್ಘಾಟನಶ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಲು ತುಂಬಾ ಸಹಕಾರಿಯಾಗಿವೆ ಎಂದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಬಾಲಕರು ಮತ್ತು ಬಾಲಕಿಯರಿಗಾಗಿ ಸ್ವಯಂಪ್ರೇರಿತರಾಗಿ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವ ಶೈಕ್ಷಣಿಕ ಆಂದೋಲನವಾಗಿದ್ದು, ಜಾತಿ, ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನವಾಗಿ ಬದುಕುವ ಹಾಗೂ ಸಹಬಾಳ್ವೆ ಜೀವನ ನಡೆಸುವ ಸಂಸ್ಥೆಯಾಗಿ ರೂಪುಗೊಂಡಿದೆ’ ಎಂದರು.

ಎಲ್ಲಾ ಶಾಲೆಗಳಲ್ಲಿಯೂ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಚಟುವಟಿಕೆ ಪ್ರಾರಂಭಿಸಬೇಕು’ . ಎಲ್ಲಾ ಶಾಲಾ ಮಕ್ಕಳು ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಸೇರ್ಪಡೆಗೊಳ್ಳಲು ಮುಂದಾಗಬೇಕು ಎಂದು ಡಾ ಪ್ರವೀಣ್ ದೇವರಗುಂಡ ಸಲಹೆ ನೀಡಿದರು.

 ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಬೆಳೆದುಬಂದ ದಾರಿ ಹಾಗೂ ಚಳವಳಿ ಕುರಿತು ಮಾಹಿತಿ ನೀಡಿದ ಶಾಲಾ ಸಂಸ್ಥಾಪನ ಮುಖ್ಯೋಪಾಧ್ಯಾಯಿನಿಯೂ ಆಗಿದ್ದ ಲೀಡರ್ಸ್ ತರಬೇತುದಾರ(ಎಲ್.ಟಿ.) ರಾದ ಸಿಸ್ಟರ್ ಬೆನ್ ವಿಟಾ ಮಾತನಾಡಿ, ಶಾಲಾ ರಜಾದಿನಗಳಲ್ಲಿ ನಡೆಸುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಪಠ್ಯ ಬೋಧನೆ ಮಾಡದೆ ಅವರ ಮನೋವಿಕಾಸಕ್ಕೆ ಪೂರಕವಾಗಿ ಪಠ್ಯೇತರ ಚಟುವಟಿಕೆಗಳನ್ನು ನಡೆಸಿದಾಗ ವಿದ್ಯಾರ್ಥಿಗಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ವಿವಿಧ ಅಭ್ಯಾಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

 ಶಿಬಿರ ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ಡಿ'ಸೋಜಾ, ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ತರಬೇತಿ ಹೊಂದಿ ಉತ್ತಮ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ರಾಷ್ಟ್ರೀಯ ಭಾವೈಕ್ಯತೆಯನ್ನು ಎತ್ತಿ ಹಿಡಿಯಬೇಕು ಎಂದರು.

ಬೇಸಿಗೆ ಶಿಬಿರದ ಮಹತ್ವ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾ ಗೈಡ್ಸ್ ನ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನಾ, ಸ್ಕೌಟಿಂಗ್, ಗೈಡಿಂಗ್ ನ ಮೂಲತತ್ವ, ಧ್ಯೇಯ, ಕೌಶಲ್ಯಗಳು, ಗ್ರಾಮೀಣ ವೃತ್ತಿ ಕೌಶಲ್ಯಗಳು ಹಾಗೂ ನಾಯಕತ್ವ ಬೆಳವಣಿಗೆ ಸೇರಿದಂತೆ ಶಿಬಿರದಲ್ಲಿ ಮಕ್ಕಳಿಗೆ ಕಲಿಸುವ ವಿಚಾರಗಳ ಕುರಿತು ಮಾಹಿತಿ ನೀಡಿದರು.

 ಸ್ಕೌಟ್ಸ್ ನ‌ ಮುಖ್ಯ ತತ್ವಗಳು ಹಾಗೂ ತರಬೇತಿಯ ವಿವಿಧ ಚಟುವಟಿಕೆಗಳ ಕುರಿತ ವಿವರಿಸಿದ ಜಿಲ್ಲಾ ಸ್ಕೌಟ್ಸ್ ವಿಭಾಗದ ತರಬೇತಿ ಆಯುಕ್ತ ಕೆ.ಯು.ರಂಜಿತ್, ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಇವುಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಸಹ ಕಾರ್ಯದರ್ಶಿ ಡಿ.ವಿ. ಗಣೇಶ್, ಖಜಾಂಚಿ ಎನ್ ಎಸ್ ನರೇಶ್ ಕುಮಾರ್ , ಸದಸ್ಯ ವಸಂತ ,ಕಬ್ಸ್ ಮತ್ತು ಬುಲ್ ಬುಲ್ಸ್ ವಿಭಾಗದ ಕಮಿಷನರ್ ಡೈಸಿ ಫ್ರಾನ್ಸಿಸ್, ಗೈಡ್ ಕ್ಯಾಪ್ಟನ್ ಆಶಾ , ಸ್ಕೌಟ್ ಮಾಸ್ಟರ್ ಎಸ್.ಎಚ್. ವಸಂತ , ಫ್ಲಾಕ್ ಲೀಡರ್ ಭವ್ಯ , ಲೇಡಿ ಕಬ್ ಮಾಸ್ಟರ್ ಪಲ್ಲವಿ, ಫಾತಿಮಾ ಪ್ರೌಢ ಶಾಲೆಯ ಗೈಡ್ ಕ್ಯಾಪ್ಟನ್ ಶಿಫಾನತ್ , ಗೈಡ್ ವಿದ್ಯಾರ್ಥಿಗಳು ಮಡಿಕೇರಿ ಮುಕ್ತ ದಳ ಬುಲ್ ಬುಲ್ ಕಬ್ಸ್ ವಿದ್ಯಾರ್ಥಿಗಳು ಅಂಜೇಲ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಕಬ್ಸ್ ಮತ್ತು ಬುಲ್ ಬುಲ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರಿಂದ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 ಇದೇ ವೇಳೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಉತ್ತಮ ಸೇವೆ ಸಲ್ಲಿಸಿದ ಸಂಸ್ಥೆಯ ಜಿಲ್ಲಾ ಗೈಡ್ಸ್ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನಾ ಹಾಗೂ ಲೀಡರ್ಸ್ ತರಬೇತುದಾರ( ಎಲ್.ಟಿ)ರಾದ ಸಿಸ್ಟರ್ ಬೆನ್ ವಿಟಾ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಿಬಿರದಲ್ಲಿ ಸ್ಕೌಟ್ಸ್ ನ ಮೂಲಭೂತ ತತ್ವಗಳು, ರಾಷ್ಟ್ರೀಯ ಭಾವೈಕ್ಯತೆ, ನಾಯಕತ್ವ ಬೆಳವಣಿಗೆ, ವೃತ್ತಿ ಕೌಶಲ್ಯಗಳು, ಆರೋಗ್ಯ ಮತ್ತು ಸ್ವಚ್ಛತೆ ಮುಂತಾದ ವಿಷಯಗಳ ಬಗ್ಗೆ ಕಬ್ಸ್,‌ಬುಲ್, ಬುಲ್ಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0