ಬೀದಿ ನಾಯಿ ದಾಳಿ: ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿ ಗಾಯ
ಕೋಲಾರ, ಡಿ.31: ನಗರದಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿರುವ ನಡುವೆಯೇ, ಒಂದೇ ಬೀದಿ ನಾಯಿ ಒಂದೂವರೆ ಗಂಟೆಯ ಅವಧಿಯಲ್ಲಿ 21 ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಆತಂಕ ಸೃಷ್ಟಿಸಿದೆ.
ನಗರದ ಆರ್‌ಟಿಒ ಕಚೇರಿ ಸುತ್ತಮುತ್ತ, ಹಳೆಯ ಹಂಚಿನ ಕಾರ್ಖಾನೆ ಬಡಾವಣೆ, ಬೆತ್ಲಹೆಮ್ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ನಾಯಿ ಏಕಾಏಕಿ ಜನರ ಮೇಲೆ ದಾಳಿ ನಡೆಸಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಅವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಗಾಯಗೊಂಡವರನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ನಾಯಿ ಅಲ್ಪ ಸಮಯದಲ್ಲಿ ಅನೇಕ ಮಂದಿಗೆ ಕಚ್ಚಿದ ಹಿನ್ನೆಲೆಯಲ್ಲಿ ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು.
ಸ್ಥಳೀಯರ ಆಕ್ರೋಶದ ನಡುವೆ ದಾಳಿ ನಡೆಸಿದ ನಾಯಿಯನ್ನು ಕೊಂದು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆ ಬಳಿಕ ಬೀದಿ ನಾಯಿಗಳ ನಿಯಂತ್ರಣದಲ್ಲಿ ವಿಫಲವಾಗಿರುವ ನಗರಸಭೆ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.