ಅನಧಿಕೃತ ಹೋಂ-ಸ್ಟೇಗಳ ವಿರುದ್ಧ ಕಠಿಣ ಕ್ರಮ; ಉಪ ವಿಭಾಗಾಧಿಕಾರಿ ಎಚ್ಚರಿಕೆ

ಅನಧಿಕೃತ ಹೋಂ-ಸ್ಟೇಗಳ ವಿರುದ್ಧ ಕಠಿಣ ಕ್ರಮ; ಉಪ ವಿಭಾಗಾಧಿಕಾರಿ ಎಚ್ಚರಿಕೆ

ಮಡಿಕೇರಿ ಮೇ.07:-ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ-ಸ್ಟೇಗಳು ಅಧಿಕೃತ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿ ಪತ್ರ ಪಡೆಯದೇ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ನೋಂದಣಿ ಪತ್ರ ಪಡೆದ ನಂತರವೇ ಹೋಂ-ಸ್ಟೇಗಳನ್ನು ನಡೆಸುವಂತೆ ಸೂಚಿಸಲಾಗಿದೆ. 

ನೋಂದಣಿ ಮಾಡಿಸದೇ ಅನಧಿಕೃತವಾಗಿ ಹೋಂ-ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಲ್ಲಿ ಅಂತಹ ಹೋಂ-ಸ್ಟೇಗಳ ವಿರುದ್ಧ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಅಧಿನಿಯಮ-2015ರಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.  

ಹೋಂ-ಸ್ಟೇ ನಡೆಸುವ ಮಾಲೀಕರು ಕಡ್ಡಾಯವಾಗಿ ಷರತ್ತು ಪಾಲಿಸುವುದು. ಎಲ್ಲಾ ಅಸ್ತಿತ್ವದಲ್ಲಿರುವ ಮತ್ತು ಹೊಸ ಹೋಂಸ್ಟೇಗಳು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಾಯಿತ ಹೋಂಸ್ಟೇಗಳ ಪಟ್ಟಿಯನ್ನು ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ ನಲ್ಲಿ ಪ್ರದರ್ಶಿಸಲಾಗುತ್ತದೆ. 

ಸಮಯದ ಹಂಚಿಕೆಯ ಆಧಾರದ ಮೇಲೆ ಯಾವುದೇ ಕೊಠಡಿಗಳನ್ನು ಬಾಡಿಗೆಗೆ ನೀಡುವಂತಿಲ್ಲ. ಹೋಂ-ಸ್ಟೇ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ಅನುಮತಿ ಪತ್ರ ಹಾಗೂ ಪರವಾನಿಗೆ ಪತ್ರಗಳನ್ನು ಪ್ರದರ್ಶಿಸಬೇಕು. ಬಾಡಿಗೆ ಅಥವಾ ಲೀಸ್ ಅಥವಾ ಉಪ ಬಾಡಿಗೆ ಮನೆಗಳನ್ನು ಹೋಂ-ಸ್ಟೇಗಳಾಗಿ ನೋಂದಾಯಿಸಲು ಅವಕಾಶವಿಲ್ಲ. ಹೋಂ-ಸ್ಟೇ ಮಾಲೀಕರು ಕಡ್ಡಾಯವಾಗಿ ಈ ಸ್ಥಳದಲ್ಲಿ ವಾಸವಿರತಕ್ಕದ್ದು. ಹೋಂ-ಸ್ಟೇನಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವುದು, ಸಿ.ಸಿ ಟಿವಿಯು 24*7 ಚಾಲ್ತಿಯಲ್ಲಿರುವುದು ಹಾಗೂ 30 ದಿನಗಳ ಪುಟೇಜ್‍ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಹಾಗೂ ಸಿಸಿ ಟಿವಿಯನ್ನು ಸರಿಯಾಗಿ ನಿರ್ವಹಿಸುವುದು. 

ಹೋಂ-ಸ್ಟೇಗೆ ನೇಮಿಸಿಕೊಳ್ಳುವ ಸಿಬ್ಬಂದಿಗಳ ಹಿನ್ನಲೆ ಪರಿಶೀಲನೆ (Background verification) ಅನ್ನು ಪೊಲೀಸ್ ಇಲಾಖೆಯ ಮುಖಾಂತರ ಕಡ್ಡಾಯವಾಗಿ ನಡೆಸುವುದು. ಅತಿಥಿಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಹೋಂ-ಸ್ಟೇ ಸ್ವಾಗತದಲ್ಲಿ Feed Back ರಿಜಿಸ್ಟರ್, ದೂರು ರಿಜಿಸ್ಟರ್ ಮತ್ತು ಪ್ರತಿಕ್ರಿಯೆ ಪುಸ್ತಕ ನಿರ್ವಹಿಸುವುದು. ಹೋಂ-ಸ್ಟೇ ನಡೆಸುವ ಮಾಲೀಕರು ಕಡ್ಡಾಯವಾಗಿ ಬಂದಂತಹ ಅತಿಥಿಗಳಿಗೆ ಬೆಳಗ್ಗಿನ ಉಪಹಾರವನ್ನು ನೀಡುವುದು. ಸ್ವಚ್ಚತೆ, ಆರೋಗ್ಯ, ನೈರ್ಮಲ್ಯ ಮತ್ತು ಅಗ್ನಿ ಸುರಕ್ಷತೆಗೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು. ಕಡ್ಡಾಯವಾಗಿ ಒಣತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳ ಸಂಗ್ರಹಣೆಗೆ ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಡುವುದು. ಮರುಬಳಕೆ, ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಮತ್ತು ತ್ಯಾಜ್ಯದ ಸರಿಯಾದ ವಿಲೇವೇರಿಯನ್ನು ಕಡ್ಡಾಯವಾಗಿ ಪ್ರೋತ್ಸಾಯಿಸುವುದು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುವಂತಿಲ್ಲ. ಹೋಂಸ್ಟೇ ಸ್ಥಳೀಯ ಅಲಂಕಾರ, ಅಧಿಕೃತ ಪಾಕಪದ್ಧತಿ, ಸ್ಥಳೀಯ ಚಟುವಟಿಕೆಗಳು ಇತ್ಯಾದಿಗಳ ಮೂಲಕ ಸ್ಥಳೀಯ ಅನುಭವವನ್ನು ಅತಿಥಿಗಳಿಗೆ ಒದಗಿಸಬೇಕು.

ಹೋಂಸ್ಟೇ ಮಾಲೀಕರು ಆಗಮಿಸಿರುವ ಅತಿಥಿಗಳು ಸಾರ್ವಜನಿಕರಿಗೆ ತೊಂದರೆ ನೀಡದಂತೆ ಅಥವಾ ನೆರೆಹೊರೆಯವರಿಗೆ ತೊಂದರೆ ನೀಡದಂತೆ ಖಚಿತಪಡಿಸಿಕೊಳ್ಳಬೇಕು. ಹೋಂಸ್ಟೇ ಕನಿಷ್ಠ 1 (ಒಂದು) ಮತ್ತು ಗರಿಷ್ಠ 6 (ಆರು) ಬಾಡಿಗೆ ಕೊಠಡಿಗಳನ್ನು ಒದಗಿಸಬೇಕು. ಹೋಂಸ್ಟೇ ಗರಿಷ್ಠ 12 (ಹನ್ನೆರಡು) ಹಾಸಿಗೆಗಳನ್ನು ಹೊಂದಿರಬಹುದು. ಮಕ್ಕಳಿಗಾಗಿ ಹಾಸಿಗೆಗಳನ್ನು ಹೊರತುಪಡಿಸಿ ಒಂದು ಕೋಣೆಯಲ್ಲಿ 3 (ಮೂರು) ಕ್ಕಿಂತ ಹೆಚ್ಚು ಹಾಸಿಗೆಗಳು ಇರುವಂತಿಲ್ಲ. ಹೋಂಸ್ಟೇಯಲ್ಲಿ ಯಾವುದೇ ಕೊಠಡಿಯನ್ನು ಡಾರ್ಮಿಟರಿಯಾಗಿ ನಿರ್ವಹಿಸಲಾಗುವುದಿಲ್ಲ ಮತ್ತು ಹೋಂಸ್ಟೇಯಲ್ಲಿ ಬಂಕ್ ಹಾಸಿಗೆಗಳನ್ನು ಒದಗಿಸಲಾಗುವುದಿಲ್ಲ. ಯಾವುದೇ ಸಮಯದಲ್ಲಿ ಗರಿಷ್ಠ 12 ವಯಸ್ಕರು ಹೋಂಸ್ಟೇಯಲ್ಲಿ ಅತಿಥಿಗಳಾಗಿ ಉಳಿಯಬಹುದು. 

ಹೋಂ-ಸ್ಟೇನಲ್ಲಿ ಅತಿಥಿಗಳು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು. ಪ್ರವಾಸೋದ್ಯಮ ಇಲಾಖೆಯ ಅನುಮೋದನೆ ಅಥವಾ ನೋಂದಣಿ ಇಲ್ಲದೇ ಹೋಂ-ಸ್ಟೇಗಳು ಕಾರ್ಯನಿರ್ವಹಿಸುತ್ತಿರುವ ಕಾನೂನುಬಾಹಿರವೆಂದು ಪರಿಗಣಿಸಲಾಗಿ ಹೋಂ-ಸ್ಟೇ ಮಾಲೀಕರು ಮತ್ತು ಪ್ರವರ್ತಕರ ವಿರುದ್ಧ ಕೆ.ಟಿ.ಟಿ.ಎಫ್ ಕಾಯ್ದೆ-2015ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅತಿಥಿಗಳು ಬಂದಾಗ ಹೋಂ-ಸ್ಟೇ ರಿಜಿಸ್ಟರ್‍ನಲ್ಲಿ ಅವರ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಾಹನ ಸಂಖ್ಯೆ ಪಡೆಯುವುದು ಹಾಗೂ ವಿದೇಶಿಯರು ಬಂದಾಗ ಅವರ ವೀಸ ಪಾಸಾಪೋರ್ಟ್ ಪರಿಶೀಲಿಸಿ ರಿಜಿಸ್ಟರ್‍ನಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು. (ಎಲೆಕ್ಟ್ರಾನಿಕ್ ಮಾಧ್ಯಮ ಅಥವಾ ಭೌತಿಕವಾಗಿ) ವಿದೇಶಿಯರ ಮಾಹಿತಿಯನ್ನು ಪೊಲೀಸ್ ಇಲಾಖೆಗೆ (ಸಿ’ ಫಾರಂ ನಲ್ಲಿ ನೀಡುವುದು) ಅಥವಾ ನಿಗಧಿತ ಮಾರ್ಗಸೂಚಿಗಳ ಪ್ರಕಾರ ಸಲ್ಲಿಸುವುದು.

ಅಧಿಕಾರಿಗಳು ತಪಾಸಣೆ ನಡೆಸುವ ಸಮಯದಲ್ಲಿ ಹೋಂ-ಸ್ಟೇ ಸಂಬಂಧಿಸಿದ ದಾಖಲಾತಿಗಳು ಹಾಗೂ ನೇಮಿಸಿಕೊಂಡ ನೌಕರರ ದಾಖಲಾತಿಗಳು, ರಿಜಿಸ್ಟರ್ ಪುಸ್ತಕ ಹಾಗೂ ಸಿಸಿ ಟಿವಿಗಳ ಡಾಟಾಗಳನ್ನು ಪರಿಶೀಲಿಸುವ ಸಮಯದಲ್ಲಿ ಮಾಲೀಕರು ಸಹಕರಿಸುವುದು.

ಇವುಗಳಲ್ಲದೇ ಮಾಹಿತಿ ಇಲ್ಲದೆ ಅನಧೀಕೃತವಾಗಿ ನಡೆಸುತ್ತಿರುವಂತಹ ಹೋಂ-ಸ್ಟೇಗಳ ಬಗ್ಗೆ ಹಾಗೂ ಹೋಂ-ಸ್ಟೇ ನೋಂದಣಿ ಮಾಡಿಕೊಳ್ಳುವ ಬಗ್ಗೆ ಸಾರ್ವಜನಿಕರು ದೂರು/ಮಾಹಿತಿ ಇದ್ದಲ್ಲಿ ಅವುಗಳ ವಿವರಗಳನ್ನು ಪತ್ರ ಮುಖೇನ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-571201 ದೂರವಾಣಿ ಸಂಖ್ಯೆ: 08272-200519 ಇ-ಮೇಲ್: ddkodagutourism@gmail.com ಅಥವಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ: 08272-229000 ಇ-ಮೇಲ್:dcmcr@ksp.gov.in ಅಥವಾ spmcr@ksp.gov.in ಗೆ ತಿಳಿಸಬಹುದು. 

ಜಿಲ್ಲೆಯಲ್ಲಿ ಅನಧಿಕೃತ ಹೋಂ-ಸ್ಟೇಗಳಿಗೆ ಕಡಿವಾಣ ಹಾಕಲು ಜಿಲ್ಲೆಯ ಜನತೆ ಕೈ ಜೋಡಿಸಿ ತಮ್ಮ ಅಕ್ಕ ಪಕ್ಕದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಹೋಂ-ಸ್ಟೇಗಳ ವಿವರಗಳನ್ನು ನೀಡಿ ಅತೀ ಅಗತ್ಯ ಸಹಕಾರವನ್ನು ನೀಡುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.