ಸಂಚಾರಿ ನಿಯಮ ಪಾಲಿಸದೆ ಇರುವವರ ವಿರುದ್ದ ಕಠಿಣ ಕಾನೂನು ಕ್ರಮ: ಡಿವೈಎಸ್‌ಪಿ ಮಹೇಶ್ ಕುಮಾರ್
ವಿರಾಜಪೇಟೆ: ರಸ್ತೆಯಲ್ಲಿ ವಾಹನ ಚಲಾಯಿಸಲು ನಿಯಮ ಕಾನೂನುಗಳು ಇವೆ. ಆದರೂ ವ್ಯವಸ್ಥೆಗೆ ಸವಾಲು ಹಾಕುವರಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಅನಿವಾರ್ಯ. ಸಂಚಾರಿ ನಿಯಮ ಪಾಲಿಸದೆ ಇರುವವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವಿರಾಜಪೇಟೆಯ ಡಿವೈಎಸ್‌ಪಿ ಮಹೇಶ್ ಕುಮಾರ್ ತೀವ್ರ ಎಚ್ಚರಿಕೆ ನೀಡಿದ್ದಾರೆ.
ವಿರಾಜಪೇಟೆಯ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಪೋಲಿಸ್ ಇಲಾಖೆ ವತಿಯಿಂದ ನಡೆದ ಆಟೋ ಚಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ಅವರು, ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಲೇ ಬೇಕು. ಇದರಲ್ಲಿ ಯಾವ ಸಡಿಲಿಕೆ ಇಲ್ಲ. ಕುಡಿದು ವಾಹನ ಚಾಲನೆ ಮಾಡುವಂತಿಲ್ಲ. ಎಲ್ಲಾ ಕಟ್ಟುನಿಟ್ಟಿನ ಕಾನೂನು ಕ್ರಮ ಇಂದಿನಿಂದಲೆ ಜಾರಿ ಆಗಲಿದೆ. ಇದು ತೋರಿಕೆ ಸಭೆಯಲ್ಲ ಎಂದರು.
ಅಂದಾಜು 800 ಆಟೋ ಗಳಿದ್ದರು ಸಭೆಗೆ ಸುಮಾರು 150 ಆಟೋ ಚಾಲಕರು ಬಂದಿರುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿ ಸಭೆಗೆ ಬರದೆ ಗೌರವ ನೀಡದ ವರ್ತನೆ ಸೂಕ್ತವಾದುದ್ದಲ್ಲ ಎಂದರಲ್ಲದೆ ಯಾವುದೇ ಸಂಚಾರಿ ನಿಯಮದ ಯಶಸ್ಸಿಗೆ, ಸಮಸ್ಯೆಗೆ ಆಟೋ ಚಾಲಕರೇ ಕಾರಣರಾಗುತ್ತಾರೆ. ವಿರಾಜಪೇಟೆ ಪಟ್ಟಣದಲ್ಲಿಯೂ ಈ ರೀತಿ ಲೋಪಗಳು ಸಾಕಷ್ಟಿದ್ದು ದೂರುಗಳಿವೆ. ಪಟ್ಟಣದಲ್ಲಿ ಹಲವಾರು ಆಟೋಗಳು ಅನಧಿಕೃತ ರೀತಿಯ ಸಂಚಾರ ನಡೆಸುತ್ತಿದೆ. ಇವರಿಗೆ ನಿಲ್ದಾಣ ಬೇಡ, ನಿಯಮ ಪಾಲನೆ ಬೇಡ, ಹಣ ಮಾಡಲು ಪಟ್ಟಣದಲ್ಲಿ ಸುತ್ತಾಡುವ ಉಳಿದ ಆಟೋದವರಿಗೂ ತೊಂದರೆ ಮಾಡುವ ಪ್ರವೃತಿ ಇವರದ್ದು. ಎಲ್ಲಾರು ಕಿತ್ತು ತಿನ್ನುವುದು ಬಿಟ್ಟು ಹಂಚಿ ತಿನಿ.ಹಣಕ್ಕಾಗಿ ಕೆಲವು ಚಾಲಕರು ಶ್ರಮಜೀವನವನ್ನು ಹಾಳುಮಾಡುತ್ತಿದ್ದಾರೆ. ಅಲ್ಲದೆ ಪಟ್ಟಣಕ್ಕೆ ಬಸ್‌ನಲ್ಲಿ ಬಂದು ಇಳಿದವರ ಜೊತೆ ತೋರುವ ವರ್ತನೆ ನಿಮ್ಮ ಇಲ್ಲಿನ ಉತ್ತಮ ಸಂಸ್ಕೃತಿಯನ್ನು ಬಿಂಬಿಸುತ್ತದೆ, ಕೆಟ್ಟ ವರ್ತನೆ ತೋರಿದರೆ ಅದು ನಮ್ಮ ಊರಿಗೆ ಕಳಂಕವಾಗಲಿದೆ ಎಂದರು. ವಿರಾಜಪೇಟೆ ಗೋಣಿಕೊಪ್ಪ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಿರುತ್ತದೆ. ಆದರೆ ಎಲ್ಲಾರು ಸರತಿ ಸಾಲಿನಲ್ಲಿ ಎಡ ಬಲದಲ್ಲಿ ಸಾಗಿ ಹೋಗುತ್ತಿರುವಾಗ ಈ ರಸ್ತೆಯಲ್ಲಿ ಸಂಚಾರಿ ನಿಯಮ ಗಾಳಿಗೆ ತೂರಿ ಎಡ ಬಲಗಳಿಂದ ಆಟೋಗಳು ವೇಗವಾಗಿ ನುಗ್ಗಿ ಸುಗಮ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವುದನ್ನು ಗಮನಿಸಿದ್ದೆವೆ. ಆಟೋ ನಿಲ್ದಾಣಕ್ಕೆ ಸ್ಥಳ ಇಲ್ಲವಾದರೂ ಅನಿವರ‍್ಯವಾಗಿ ಚಾಲಕರ ಅಗತ್ಯಕ್ಕೆ ನಿಲ್ದಾಣಕ್ಕೆ ಜಾಗ ನೀಡಿದ್ದೆವೆ.
ಅದು ನಿಮ್ಮ ಅಧಿಕಾರದ ತಾಣವಲ್ಲ ನಿಯಮ ಪಾಲಿಸಿ. ಮುಖ್ಯ ರಸ್ತೆಯಲ್ಲಿ ಸಿಕ್ಕ ಸಿಕ್ಕಲಿ ನುಗ್ಗುವುದಕ್ಕೆ ಕಡಿವಾಣ ಹಾಕುತ್ತೆವೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಜನರನ್ನು ಇಳಿಸಿ ನಿಲ್ದಾಣಕ್ಕೆ ಬರದೆ ಅಲ್ಲಿಯೇ ಮೊಬೈಲ್‌ನಲ್ಲಿ ರೀಲ್ಸ್ ನೋಡುವುದನ್ನು ನಿಲ್ಲಿಸಿ. ಆಟೋ ತಂದು ಬೇರೆ ವಾಹನ ನಿಲುಗಡೆಯಲ್ಲಿ ನಿಲ್ಲಿಸಿಕೊಂಡು ಗ್ರಾಹಕರು ಇದ್ದಾರೆ. ಎನೋ ವ್ಯಾಪಾರಕ್ಕೆ ಹೋಗಿದ್ದಾರೆ ಎಂದು ಸುಳ್ಳು ಹೇಳಿ ಕಾಯುವ ಪ್ರವೃತಿಯನ್ನು ಇಂದೆ ಬಿಡಿ ಇಲ್ಲವಾದರೆ ಕ್ರಮ ಖಚಿತ ಎಂದು ಮಹೇಶ್ ಕುಮಾರ್ ಹೇಳಿದರು.
ಸಭೆಯಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ ವಿಟಿಪಿಎಸ್ ಸಂಖ್ಯೆ ಆಟೋಗಳಿಗೆ ನೀಡಲಾಗಿದೆ. ಆದರೆ ಇನ್ನು ಕೆಲವರು ಅದನ್ನು ತಮ್ಮ ವಾಹನದಲ್ಲಿ ಬಳಸಿಕೊಂಡಿಲ್ಲ ಇಂತಹ ಆಟೋವನ್ನು ವಶಕ್ಕೆ ಪಡೆಯುವುದು ನಿಶ್ಚಿತ. ಮಿತಿ ಮೀರಿ ಆಟೋಗಳಿಗೆ ಜನರನ್ನು ತುಂಬಿಸುವ ಪ್ರವೃತಿಯನ್ನು ತಕ್ಷಣ ನಿಲ್ಲಿಸಿ. ಶಾಲಾ ಮಕ್ಕಳನ್ನು ಚಾಲಕರ ಬಳಿ ಕೂರಿಸಿಕೊಂಡು ಚಾಲನೆ ಬೇಡ.
ಇದು ಅಪಾಯಕ್ಕೆ ಆಹ್ವಾನವೆಂಬುದು ತಿಳಿದಿರಲಿ. ಇದಕ್ಕೆ ಕಾನೂನು ಕ್ರಮ ಖಂಡಿತ. ಚಾಲನೆಯಲ್ಲಿ ಜಾಗೃತೆ ವಹಿಸಿ. ಮದ್ಯಪಾನ ಮಾದಕ ವಸ್ತುಗಳ ಸೇವನೆ ಬೇಡ, ಜನರ ಪ್ರಾಣ ಮುಖ್ಯ ಜೊತೆಗೆ ನಿಮ್ಮ ಸಂಸಾರದ ಬಗ್ಗೆಯೂ ಕಾಳಜಿ ಇರಲಿ ಎಂದರು. ಸಭೆಯಲ್ಲಿ ನಗರ ಠಾಣಧಿಕಾರಿ ಪ್ರಮೋದ್ ಸಭೆಯನ್ನು ಉದೇಶಿಸಿ ಮಾತನಾಡಿದರು.
ಗ್ರಾಮಾಂತರ ಠಾಣಧಿಕಾರಿ ವಾಣಿಶ್ರಿ ಸಭೆಯಲ್ಲಿ ಉಪಸ್ಥಿತರಿದ್ದರು. ಆಟೋ ಚಾಲಕರ ಸಂಘದ ಅಧ್ಯಕ್ಷ ಶಶಿಧರನ್, ಜೈ ಭಾರತ್ ಆಟೋಚಾಲಕರ ಮತ್ತು ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಶಿವು ಮತ್ತಿತರರು ಸಭೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
