State News

ಟೋಲ್ ಮಾರ್ಗ ತಪ್ಪಿಸಿದ ವಿಚಾರಕ್ಕೆ ವಿದ್ಯಾರ್ಥಿನಿ ಮೇಲೆ ಹಲ್ಲೆ: ಕ್ಯಾಬ್ ಚಾಲಕನ ಬಂಧನ : ಮೊದಲೇ ಟೋಲ್ ಚಾರ್ಜ್ ಪಾವತಿಸಿಕೊಂಡಿದ್ದ ಚಾಲಕ

admincoorgdaily

3ಬೆಂಗಳೂರು, ಅ.25: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಟೋಲ್ ಮಾರ್ಗ ತಪ್ಪಿಸಿದ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ 19 ವರ್ಷದ ವಿದ್ಯಾರ್ಥಿನಿ ಮೇಲೆ ಕ್ಯಾಬ್ ಚಾಲಕ ಹಲ್ಲೆ ನಡೆಸಿದ ಘಟನೆ ನಡೆದಿದ. ಪೊಲೀಸರು ಹಲ್ಲೆ ನಡೆಸಿದ ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.

ಅಕ್ಟೋಬರ್ 20ರಂದು ಈ ಘಟನೆ ನಡೆದಿದೆ. ಆರೋಪಿ ಕೇರಳದ ತ್ರಿಶೂರ್ ಮೂಲದ ಎಜಾಸ್ ಪಿ.ಎಸ್ (31) ಎಂಬ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದರು. ಆಕೆ ವಿಮಾನ ನಿಲ್ದಾಣಕ್ಕೆ ತೆರಳಲು ಆನ್‌ಲೈನ್ ಅಗ್ರಿಗೇಟರ್‌ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಟೋಲ್ ಶುಲ್ಕವನ್ನು ಮುಂಗಡವಾಗಿ ಪಾವತಿಸಿದ್ದರೂ, ಚಾಲಕ ಟೋಲ್ ಮಾರ್ಗ ತಪ್ಪಿಸಿದ್ದಾನೆ. ಈ ಕುರಿತು ವಿದ್ಯಾರ್ಥಿನಿ ಪ್ರಶ್ನಿಸಿದಾಗ, ಚಾಲಕ ಸರಿಯಾದ ವಿವರಣೆ ನೀಡದೆ ವಾಗ್ವಾದಕ್ಕೆ ತೊಡಗಿದ್ದಾನೆ.

ಕೋಪಗೊಂಡ ವಿದ್ಯಾರ್ಥಿನಿ ಕಾರು ನಿಲ್ಲಿಸಲು ಹೇಳಿ ಇಳಿದ ಬಳಿಕ ಮತ್ತೊಂದು ಕ್ಯಾಬ್ ಬುಕ್ ಮಾಡಲು ಯತ್ನಿಸಿದಾಗ, ಆರೋಪಿಯು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆತ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ವಿದ್ಯಾರ್ಥಿನಿ ತನ್ನ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಬೇಕಾಯಿತು.

ಘಟನೆಯ ಕುರಿತು ವಿದ್ಯಾರ್ಥಿನಿಯ ಚಿಕ್ಕಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದಲ್ಲಿ ಹಾನಿ, ಕ್ರಿಮಿನಲ್ ಬೆದರಿಕೆ ಹಾಗೂ ತಪ್ಪು ನಡವಳಿಕೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಚಾಲಕ ಘಟನೆಗೆ ಎರಡು ದಿನಗಳ ಮೊದಲು ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಬುಕಿಂಗ್ ಸಮಯದಲ್ಲಿ ಮದ್ಯಪಾನ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.