ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ

Aug 8, 2026 - 14:39
 0  110
ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ

ವಿರಾಜಪೇಟೆ:ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಶಿಸ್ತನ್ನು ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭವನ್ನು ಇತ್ತೀಚೆಗೆ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ನಾಯಕತ್ವದ ಗುಣ ಬೆಳೆಸಿಕೊಳ್ಳಿ- ಲೆಫ್ಟಿನೆಂಟ್ ಲೇಪಾಕ್ಷಿ:

ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಅಧಿಕಾರ ದೀಕ್ಷೆ ನೆರವೇರಿಸಿ ಮಾತನಾಡಿದ ಮುಖ್ಯ ಅತಿಥಿ, ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಲೇಪಾಕ್ಷಿ ಐ.ಡಿ. ಅವರು,"ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣಗಳು, ಶಿಸ್ತು ಮತ್ತು ದೇಶಪ್ರೇಮವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಇಲ್ಲಿ ಅಧಿಕಾರ ಸ್ವೀಕರಿಸಿದ ನಾಯಕರು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಡೆದುಕೊಳ್ಳಬೇಕು. ಶಾಲಾ ಹಂತದಲ್ಲಿ ಸಿಗುವ ಇಂತಹ ಜವಾಬ್ದಾರಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಅಡಿಪಾಯವಾಗಲಿವೆ ಎಂದು ಹೇಳಿದರು.

ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ- ರೋಟೇರಿಯನ್ ಬಿ.ಬಿ. ಮಾದಪ್ಪ:

   ಗೌರವ ಅತಿಥಿಯಾಗಿ ಭಾಗವಹಿಸಿ ಪ್ರೇರಣಾದಾಯಿಕ ಭಾಷಣ ಮಾಡಿದ ರೋಟರಿ ಟ್ರಸ್ಟ್ ಚೇರ್‌ಮನ್ ರೋಟೇರಿಯನ್ ಬಿ.ಬಿ. ಮಾದಪ್ಪ ಅವರು,"ನಾಯಕತ್ವ ಎಂಬುದು ಕೇವಲ ಹುದ್ದೆಯಲ್ಲ, ಅದೊಂದು ಜವಾಬ್ದಾರಿ. ನೂತನವಾಗಿ ಆಯ್ಕೆಯಾದ ಶಾಲಾ ನಾಯಕರು ಶಾಲೆಯ ಶಿಸ್ತು ಮತ್ತು ಗೌರವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ, ಅದನ್ನು ಗುರುತಿಸಿ ಬೆಳೆಸಿಕೊಳ್ಳುವ ಕೆಲಸವಾಗಬೇಕು"ಎಂದು ಕರೆ ನೀಡಿದರು.

   ಸಮಾರಂಭದಲ್ಲಿ ರೋಟರಿ ಟ್ರಸ್ಟ್ ಕಾರ್ಯದರ್ಶಿ ರೊಟೆರಿಯನ್ ಸರೋಜ್ ಕಾರ್ಯಪ್ಪ ಉಪಸ್ಥಿತರಿದ್ದು, ನೂತನ ನಾಯಕರಿಗೆ ಶುಭ ಹಾರೈಸಿದರು.

 ಶಾಲಾ ಮುಖ್ಯೋಪದ್ಯಾಯರಾದ ವಿಶಾಲಾಕ್ಷಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, "ವಿದ್ಯಾರ್ಥಿ ಹಂತದಲ್ಲಿ ಸಿಗುವ ಜವಾಬ್ದಾರಿಗಳು ಮಗುವಿನಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯ ಶಿಸ್ತು ಹಾಗೂ ನಿಯಮಗಳನ್ನು ಪಾಲಿಸುತ್ತಾ, ತಮ್ಮ ಕರ್ತವ್ಯಗಳನ್ನು ಪ್ರೀತಿಯಿಂದ ನಿರ್ವಹಿಸಬೇಕು. ಹುದ್ದೆ ಸ್ವೀಕರಿಸಿದ ನೂತನ ನಾಯಕರು ಇಡೀ ಶಾಲೆಗೆ ಮಾದರಿಯಾಗಿ ನಿಂತು, ತಮ್ಮ ಸಹಪಾಠಿಗಳನ್ನು ಪ್ರೀತಿ ಮತ್ತು ಗೌರವದಿಂದ ಮುನ್ನಡೆಸಲಿ ಎಂದು ಹಾರೈಸಿದರು.

  ಶಾಲಾ ನಾಯಕಿಯಾಗಿ ಹನ್ನಾ ವಿಲ್ಸನ್, ಉಪ ಶಾಲಾ ನಾಯಕಿ ರಕ್ಷಿತಾ, ಕ್ರೀಡಾ ನಾಯಕಿ ರಿದಾ ಫಾತಿಮಾ, ಉಪ ಕ್ರೀಡಾ ನಾಯಕ ಆರ್ಯ ಚಿನ್ನಪ್ಪ, ಸಾಂಸ್ಕೃತಿಕ ನಾಯಕಿ ಗ್ರೀಶಾಲಿ, ಉಪ ಸಾಂಸ್ಕೃತಿಕ ನಾಯಕಿ ನಿಷ್ಮಾ ಕಿರಣ್, ಶಿಸ್ತು ನಾಯಕ ಭವಿಷ್ ಪಿ., ಉಪ ಶಿಸ್ತು ನಾಯಕಿ ಯಶಸ್ವಿನಿ, ಆರೋಗ್ಯ ನಾಯಕಿ ರಚನಾ, ಉಪ ಆರೋಗ್ಯ ನಾಯಕಿ ತಶ್ವಿ, ಹೌಸ್ ನಾಯಕರಾಗಿ ಎಮರಾಲ್ಡ್ ಹೌಸ್‌ನ ಕ್ಯಾಪ್ಟನ್ ಅನ್ವಿಕಾ, ವೈಸ್ ಕ್ಯಾಪ್ಟನ್ ಹಫ್ನಾಜ್, ರೂಬಿ ಹೌಸ್ ಕ್ಯಾಪ್ಟನ್ ಪ್ರೇಕ್ಷಾ, ವೈಸ್ ಕ್ಯಾಪ್ಟನ್ ನವ್ಯಶ್ರೀ, ಸಫೈರ್ ಹೌಸ್ ಕ್ಯಾಪ್ಟನ್ ಯಾನ್ ಸಿ.ಪಿ., ವೈಸ್ ಕ್ಯಾಪ್ಟನ್ ಹಿಬಾ, ಟೋಪಾಜ್ ಹೌಸ್ ಕ್ಯಾಪ್ಟನ್ ಮೊಹಮ್ಮದ್ ಶಾನ್, ವೈಸ್ ಕ್ಯಾಪ್ಟನ್ ವಿಬಿನ್ ಕುಶಾಲಪ್ಪ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 

  ಶಾಲೆಯ ಶಿಕ್ಷಕ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0