CRIME

ಅಣ್ಣನ ಮದುವೆಯಾಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತ: ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ : ಸಾವಿನಲ್ಲೂ ಬೆಳಕಾದ LLB ವಿದ್ಯಾರ್ಥಿನಿ

admincoorgdaily

ಅಣ್ಣನ ಮದುವೆಯಾಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತ: ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ : ಸಾವಿನಲ್ಲೂ ಬೆಳಕಾದ LLB ವಿದ್ಯಾರ್ಥಿನಿ

ಬೆಂಗಳೂರು, ಜುಲೈ 16: ಅಣ್ಣನ ಜೊತೆ ಮದುವೆ ಆಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಅಮೃತಾ ಮೃತ ದುರ್ದೈವಿಯಾಗಿದ್ದು, ಈಕೆಗೆ ಜು.13ರಂದು ಬೆಂಗಳೂರಿನ HAL ರಸ್ತೆಯ ಕೋಡಿಹಳ್ಳಿಯಲ್ಲಿ ಸೂರ್ಯ ಎಂಬಾತ ಚಾಕು ಇರಿದಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅಮೃತಾ ನಿನ್ನೆ ಪ್ರಾಣಬಿಟ್ಟಿದ್ದಾರೆ.

ಅಮೃತಾ ಮತ್ತು ಆರೋಪಿ ಸೂರ್ಯ ಸಹೋದರ ಧನುಷ್ ಪರಸ್ಪರ ಪ್ರೀತಿಸುತ್ತಿದ್ದರು. ಇವರೆಲ್ಲ ಒಂದೇ ಏರಿಯಾದವರಾಗಿದ್ದು, ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳ ನಡುವೆ ಪರಿಚಯವಾಗಿತ್ತು. ಅದೇ ಪರಿಚಯದಿಂದ ಧನುಷ್ ಮತ್ತು ಅಮೃತಾ ಆತ್ಮೀಯರಾಗಿದ್ರು. ಬಳಿಕ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಧನುಷ್ಗೆ ಅದಾಗಲೇ ಮದುವೆಯಾಗಿ 1 ಮಗುವಿದ್ದು, ಪತ್ನಿಯಿಂದ ಆತ ವಿಚ್ಚೇದನ ಪಡೆದಿದ್ದ. ಆದರೆ ಈ ವಿಚಾರವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದ ಎನ್ನಲಾಗಿದೆ. ನಂತರ ವಿಷಯ ಗೊತ್ತಾದ ಬಳಿಕ ಧನುಷ್ನಿಂದ ಅಮೃತಾ ದೂರವಾಗಿದ್ದರು. ಇದೇ ವಿಚಾರಕ್ಕೆ ಜು.13ರಂದು ಯುವತಿ ಮನೆ ಬಳಿ ಧನುಷ್ ಸಹೋದರ ಸೂರ್ಯ ಗಲಾಟೆ ಮಾಡಿದ್ದು, ಚಾಕು ಇರಿದಿದ್ದ. ಪ್ರಕರಣ ಸಂಬಂಧ ಆರೋಪಿಗಳಾದ ಸೂರ್ಯ ಮತ್ತು ಧನುಷ್ನನ್ನು ಪೊಲೀಸರು ಬಂಧಿಸಿದ್ದು, ಜೀವನ್ಭೀಮಾನಗರ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.

ವಕೀಲೆಯಾಗಬೇಕೆಂದು ಕನಸು ಕಂಡಿದ್ದ ಅಮೃತಾ

22 ವರ್ಷದ ಅಮೃತಾ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿದ್ದು, ಮುಂದು ವಕೀಲೆಯಾಗುವ ಕನಸು ಕಂಡಿದ್ದಳು. ಆದರೀಗ ದಾರುಣ ಅಂತ್ಯ ಕಂಡಿದ್ದಾಳೆ. ಹೀಗಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಯುವತಿಯ ಕುಟುಂಬಸ್ಥರು, ಸಹಪಾಠಿಗಳು ಆಗ್ರಹಿಸಿದ್ದಾರೆ.

ಯುವತಿಯ ನೇತ್ರದಾನಕ್ಕೆ ಕುಟುಂಬಸ್ಥರ ನಿರ್ಧಾರ

ಇನ್ನು ಯುವತಿ ಅಮೃತಾರ ನೇತ್ರದಾನಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮಗಳ ಸಾವಿನ ಶೋಕದ ನಡುವೆಯೂ ಮಾನವೀಯತೆ ಮೆರೆದ ಅಮೃತಾ ಕುಟುಂಬದ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೃತಾ ಕೊನೆಯುಸಿರೆಳೆದ ತಕ್ಷಣವೇ, ಕುಟುಂಬದವರು ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ವೈದ್ಯರು ಈ ಬಗ್ಗೆ ಕುಟುಂಬದವರೊಂದಿಗೆ ಮಾತನಾಡಿದಾಗ, ಅವರು ತಕ್ಷಣವೇ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.