CRIME

ಓದಿದ್ದು ಬಿಎ, ಮಾಡಿದ್ದು ಕಳ್ಳತನ: ಬೆಂಗಳೂರಿನಲ್ಲಿ 21 ಲ್ಯಾಪ್‌ಟಾಪ್ ಕದ್ದ ಯುವಕ ಅರೆಸ್ಟ್

admincoorgdaily

Photo credit: TV09

ಬೆಂಗಳೂರು, ಡಿ.01: ಉದ್ಯೋಗದ ಹಂಬಲದಿಂದ ನಗರಕ್ಕೆ ಬಂದಿದ್ದ ಬಿಎ ಪದವೀಧರನೊಬ್ಬ, ಕೆಲಸ ಸಿಗದೇ ಹತಾಶನಾಗಿ ಕಳ್ಳತನದ ದಾರಿ ಹಿಡಿದ ಪ್ರಕರಣ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 

ಪಿಜಿಗಳನ್ನೇ ಗುರಿಯಾಗಿಸಿಕೊಂಡು ಲ್ಯಾಪ್‌ಟಾಪ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದು, ಒಟ್ಟು 21 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರು ಮೂಲದ ಗೋವರ್ಧನ್ ಎಂಬಾತ ನಾಲ್ಕು ತಿಂಗಳು ಹಿಂದೆ ಬೆಂಗಳೂರಿಗೆ ಉದ್ಯೋಗದ ನಿರೀಕ್ಷೆಯಿಂದ ಬಂದಿದ್ದ. ಸ್ನೇಹಿತನ ಪಿಜಿಯಲ್ಲಿ ವಾಸವಾಗಿದ್ದ ಅವನು, ಕೆಲಸ ಸಿಗದೇ ನಿರಾಶನಾಗಿದ್ದ. ಹಣಕಾಸಿನ ಒತ್ತಡ ಹೆಚ್ಚುತ್ತಿದ್ದಂತೆ, ಮೊದಲಿಗೆ ಸ್ನೇಹಿತನ ಪಿಜಿಯಲ್ಲಿದ್ದ ಲ್ಯಾಪ್‌ಟಾಪ್ ಕದ್ದು, ಪರಿಚಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಸುಲಭ ಹಣ ಗಳಿಸುವ ಯತ್ನ ಮಾಡಿದ್ದಾನೆ.

ಈ ‘ಸರಳ ಮಾರ್ಗ’ವೇ ರೂಢಿಯಾಗಿ, ನಂತರ ಹಲವು ಪಿಜಿಗಳನ್ನು ಗುರಿಯಾಗಿಸಿಕೊಂಡು ಲ್ಯಾಪ್‌ಟಾಪ್ ಕಳ್ಳತನ ಮುಂದುವರೆಸಿದ್ದಾನೆ. ಮೈಕೋ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಯ ವೇಳೆ ಆರೋಪಿಯ ನಂಟು ಬಹಿರಂಗವಾಗಿದ್ದು, ಪೊಲೀಸರು ಗೋವರ್ಧನ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ತನಿಖೆಯಲ್ಲಿ ಆರೋಪಿಯಿಂದ ಬರೋಬ್ಬರಿ 21 ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಲ್ಯಾಪ್‌ಟಾಪ್ ಕಳೆದುಕೊಂಡವರು ನೀಡಿದ ದೂರುಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗಿದೆ.