Kodagu

ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಕ.ಸಾ.ಪ.ವತಿಯಿಂದ ಸೂದನ ರಾಘವಯ್ಯ ದತ್ತಿ ಕಾರ್ಯಕ್ರಮ

admincoorgdaily

ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಕ.ಸಾ.ಪ.ವತಿಯಿಂದ ಸೂದನ ರಾಘವಯ್ಯ ದತ್ತಿ ಕಾರ್ಯಕ್ರಮ

ಕುಶಾಲನಗರ, ಆ.25: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು( ಕ.ಸಾ.ಪ.) ಹಾಗೂ ಕುಶಾಲನಗರ ತಾಲ್ಲೂಕು ಕ.ಸಾ.ಪ. ಮತ್ತು ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಆ.25 ರಂದು) ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ದಿವಂಗತ ಸೂದನ ರಾಘವಯ್ಯ ದತ್ತಿ ಕಾರ್ಯಕ್ರಮ ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

 ವಿದ್ಯಾರ್ಥಿನಿ ನವ್ಯಳಿಗೆ ಪ್ರತಿಭಾ ಪುರಸ್ಕಾರ: ಇದೇ ವೇಳೆಯಲ್ಲಿ 2025-26 ನೇ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಶೇ.98.77 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದ ಶನಿವಾರಸಂತೆಯ ವಿಘ್ನೇಶ್ವರ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ನವ್ಯ ಎಚ್.ಕೆ. ಅವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ವಿದ್ಯಾರ್ಥಿಗಳು ನಾಡು- ನುಡಿ, ಭಾಷೆ ಸಾಹಿತ್ಯ , ಸಂಸ್ಕ್ರತಿ ಹಾಗೂ ಪರಂಪರೆ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಮೂಲಕ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಓದಿನೊಂದಿಗೆ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳುವುದು ಅತ್ಯಗತ್ಯ. ಸಾಹಿತ್ಯವು ವ್ಯಕ್ತಿತ್ವ ವಿಕಸನಕ್ಕೆ, ಸೃಜನಶೀಲತೆ ಹೆಚ್ಚಿಸಲು ಮತ್ತು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುತ್ತದೆ. ಇದು ಭಾಷೆಯ ಮೇಲಿನ ಹಿಡಿತವನ್ನು ಗಟ್ಟಿಗೊಳಿಸಿ, ಜೀವನದ ಮೌಲ್ಯಗಳನ್ನು ಕಲಿಸುತ್ತದೆ. ಸಾಹಿತ್ಯ ಅಭಿರುಚಿಯಿಂದ ಜ್ಞಾನ ವೃದ್ಧಿ, ಮಾನಸಿಕ ನೆಮ್ಮದಿ,ಸೃಜನಶೀಲತೆ, ಕ್ರಿಯಾಶೀಲತೆ,ಸಂಸ್ಕೃತಿ ಅರಿವಿನಂತಹ ಪ್ರಯೋಜನಗಳು ಲಭಿಸುತ್ತವೆ ಎಂದರು.

 ಗ್ರಂಥಾಲಯಗಳನ್ನು ಬಳಸಿ ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿ ಓದಿ. ಇದರಿಂದ ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಯ ಪರಿಚಯವಾಗುತ್ತದೆ ಎಂದು ಕೇಶವಕಾಮತ್ ಹೇಳಿದರು. ವಿದ್ಯಾರ್ಥಿನಿ ನವ್ಯ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ವಿದ್ಯಾರ್ಥಿನಿ‌ ನವ್ಯಳಂತೆ ಉತ್ತಮ ಸಾಧನೆ ಮಾಡಬೇಕು ಎಂದರು.

 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜ್ಞಾನಗಂಗಾ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಟಿ.ಕೆ.ಸುಧೀರ್ , ವಿದ್ಯಾರ್ಥಿಗಳು ನಿರಂತರ ಕಲಿಕೆ, ಸತತ ಅಭ್ಯಾಸ, ನಿರ್ದಿಷ್ಠ ಗುರಿ ಹಾಗೂ ಕಠಿಣ ಪರಿಶ್ರಮದಿಂದ ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಉತ್ತಮ ಕಲಿಕೆ ಮತ್ತು ಉತ್ತಮ ಶಿಕ್ಷಣದಿಂದ ಉತ್ತಮ ಭವಿಷ್ಯ ಮತ್ತು ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಯಶಸ್ಸಿನ ಜೀವನ ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ ಎಂದರು.

ವಿದ್ಯಾರ್ಥಿನಿ ಎಚ್.ಕೆ.ನವ್ಯ ಳ ಸಾಧನೆಯು ವಿದ್ಯಾರ್ಥಿಗಳಿಗೆ ಪ್ರೇರೆಣೆಯಾಗಿದೆ ಎಂದು ಸುಧೀರ್ ಹೇಳಿದರು. ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಎದುರಿಸಬೇಕು ಎಂಬ ಬಗ್ಗೆ ಉಪನ್ಯಾಸ ನೀಡಿದ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಭಾಷಾ ಅಧ್ಯಾಪಕ ಮೆ.ನಾ.ವೆಂಕಟನಾಯಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಇಂತಹ ಸಾಧನೆ ಮಾಡಿರುವ ಅನೇಕ ಜನ ಈ ಜಗತ್ತಿನಲ್ಲಿ ಸಾಕಷ್ಟು ಇದ್ದಾರೆ. ಅವರಲ್ಲಿ ಭಾರತದ ಹೆಸರನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದವರಲ್ಲಿ ನೋಬಲ್ ಪುರಸ್ಕ್ರತ ವಿಜ್ಞಾನಿ ಸರ್. ಸಿ. ವಿ. ರಾಮನ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಸರ್ ಎಂ ವಿಶ್ವೇಶ್ವರಯ್ಯ, ಕೆ. ಆರ್. ನಾರಾಯಣ ಮತ್ತಿತರ ಸಾಧಕರು ವಿದ್ಯಾರ್ಥಿಗಳಿಗೆ ಆದರ್ಶ ವ್ಯಕ್ತಿ ಗಳಾಗಿದ್ದಾರೆ ಎಂದರು.

 ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯದ ದೃಷ್ಟಿಯಿಂದ ಇಷ್ಟಪಟ್ಟು ಓದಬೇಕೇ ಹೊರತು ಕಷ್ಟಪಟ್ಟು ಓದಬಾರದು. ಏಕಾಗ್ರತೆ, ಸದೃಢತೆ, ಓದುವ ಛಲ- ಇವುಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನ ಉದ್ದಕ್ಕೂ ಬೆಳೆಸಿಕೊಂಡರೆ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬಹುದು ಎಂದರು.

ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಬಗ್ಗೆ ಯಾವುದೇ ಆತಂಕ ಪಡದೇ ಕಠಿಣ ಪರಿಶ್ರಮ ಹಾಗೂ ಸತತ ಅಭ್ಯಾಸದೊಂದಿಗೆ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಬೆಳೆಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದು ವೆಂಕಟನಾಯಕ್ ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ನವ್ಯ ಎಚ್.ಕೆ., ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಮಗೆ ಉತ್ತಮ ಸಾಧನೆ ಮಾಡಲು ಕಾರಣರಾದ ಶಾಲಾ ಶಿಕ್ಷಕರು ಹಾಗೂ ಪೋಷಕರಿಗೆ ಧನ್ಯವಾದ ಸಮರ್ಪಿದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿನಿ ನವ್ಯ ಹೇಳಿದರು.

ಜ್ಞಾನಗಂಗಾ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ, ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.77 ಫಲಿತಾಂಶ ಗಳಿಸಿಬ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿ ಎಚ್.ಕೆ.ನವ್ಯ ಅವರ ಸಾಧನೆಯು ಹೆಮ್ಮೆಯ ಸಂಗತಿ ಎಂದರು.

ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಜಿಲ್ಲಾ ಕ.ಸಾ.ಪ.ಸಂಘಟನಾ ಕಾರ್ಯದರ್ಶಿ ಕೆ.ಎನ್.ದೇವರಾಜ್, ಎಸ್.ಬಿ.ಐ.ಬ್ಯಾಂಕ್ ನ ನಿವೃತ್ತ ಹಿರಿಯ ವ್ಯವಸ್ಥಾಪಕಿ ಸೂದನ ರತ್ನಾವತಿ ಮಾತನಾಡಿದರು. ತಾಲ್ಲೂಕು ಕ.ಸಾ.ಪ.ಕೋಶಾಧಿಕಾರಿ ಕೆ.ವಿ.ಉಮೇಶ್, ಶಾಲೆಯ ಪ್ರಾಂಶುಪಾಲರಾದ ಜೆ.ಎ.ಸಂಜನಾ , ಕನ್ನಡ ಭಾಷಾ ಶಿಕ್ಷಕರಾದ ಎಚ್.ಭಾಸ್ಕರ್, ಜಲಾವತಿ, ವಿದ್ಯಾರ್ಥಿನಿ ನವ್ಯ ಅವರ ಪೋಷಕರಾದ ಕೃಷ್ಣಪ್ಪ ಮತ್ತು ಕವಿತ ಇದ್ದರು.

ಇದೇ ವೇಳೆಯಲ್ಲಿ ಜ್ಞಾನಗಂಗಾ ವಸತಿ ಶಾಲೆಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿನಿ‌ ನವ್ಯ ಅವರಿಗೆ ಕಿರು ಕಾಣಿಕೆ ನೀಡಿ ಅಭಿನಂದಿಸಲಾಯಿತು. ಕನ್ನಡ ಭಾಷಾ ಶಿಕ್ಷಕಿ ಜಲಾವತಿ ನಿರ್ವಹಿಸಿದರು. ವಿದ್ಯಾರ್ಥಿ ಯಶಿಕಾ ರಾಜ್ ಸ್ವಾಗತಿಸಿದರು. ವಿದ್ಯಾರ್ಥಿ ತನ್ಮಯ್ ವಂದಿಸಿದರು. ವಿದ್ಯಾರ್ಥಿನಿ ಪಲ್ಗುಣಿ ಪ್ರಾರ್ಥಿಸಿದರು. ಶಾಲಾ ಶಿಕ್ಷಕರು/ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಇದ್ದರು. ಸಂಗೀತ ಶಿಕ್ಷಕಿ ರತ್ನಾವತಿ ಕನ್ನಡ ನಾಡು ಕುರಿತ ಗೀತೆ ಹಾಡಿದರು. ಜಿಲ್ಲಾ ಚೆಸ್ ಛಾಂಪಿಯನ್ ಆದ ಶಾಲೆಯ 9 ನೇ ತರಗತಿಯ ಉನ್ನತ್ ಸಾರಥ್ಯ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು.