Kodagu

ಸೂಫಿ ಹಾಜಿಗೆ ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ: ಆ. 15ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ

admincoorgdaily

ಸೂಫಿ ಹಾಜಿಗೆ ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ:  ಆ. 15ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ

ಮಡಿಕೇರಿ:ನವದೆಹಲಿಯ 'ಐ ಕ್ಯಾನ್ ಫೌಂಡೇಶನ್ ಇಂಡಿಯಾ' ವತಿಯಿಂದ ಪ್ರತಿವರ್ಷ ಆಗಸ್ಟ್ 15ರ 'ವಿಶ್ವ ಮಾನವೀಯತೆ ದಿನಾಚರಣೆ ' ಅಂಗವಾಗಿ ನೀಡಲಾಗುವ 'ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ' ಗೆ ಈ ಬಾರಿ ಕರ್ನಾಟಕದಿಂದ ವಿರಾಜಪೇಟೆಯವರಾದ ದುದ್ದಿಯಂಡ ಸೂಫಿ ಹಾಜಿ ಆಯ್ಕೆಯಾಗಿದ್ದಾರೆ. 'ಭಾರತದ ಅತ್ಯಂತ ಸ್ಪೂರ್ತಿದಾಯಕ ಬದಲಾವಣೆಯ ಹರಿಕಾರ'ರ ವಿಭಾಗದಿಂದ ಆಯ್ಕೆಗೊಂಡಿರುವ ಸೂಫಿ ಹಾಜಿಯವರಿಗೆ ಈ ಪ್ರಶಸ್ತಿಯನ್ನು ಇದೇ ತಿಂಗಳ 15ರಂದು ನವದೆಹಲಿಯಲ್ಲಿ ನಡೆಲಿರುವ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು.

ಉದ್ಯಮಿಗಳಾಗಿ, ಸಮಾಜ ಸೇವಕರಾಗಿರುವ ಸೂಫಿ ಹಾಜಿ ಪ್ರಸ್ತುತ ಕೊಡವ ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾದ ಕೊಡವ ಮುಸ್ಲಿಂ ಅಸೋಸಿಯೇಷನ್ ಹಾಗೂ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಅಧ್ಯಕ್ಷರಾಗಿದ್ದಾರೆ. ಕಳೆದ 18 ವರ್ಷಗಳಿಂದ ಈ ಸಂಘಟನೆಯ ಅಧ್ಯಕ್ಷರಾಗಿ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ತೋರಿದ ಸಾಧನೆಗಾಗಿ ಇವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು 'ಐ ಕ್ಯಾನ್ ಫೌಂಡೇಶನ್ ಇಂಡಿಯಾ' ತಿಳಿಸಿದೆ. 

ಕಡು ಬಡತನದಲ್ಲಿ ಹುಟ್ಟಿ ಬೆಳೆದ ಸೂಫಿ ಹಾಜಿ, ತಮ್ಮ ಸ್ವಂತ ಪರಿಶ್ರಮದ ಮೂಲಕ ಮೇಲೆ ಬಂದು ಇದೀಗ ತಮ್ಮ ಸಂಪಾದನೆಯ ಒಂದು ಭಾಗವನ್ನೇ ಸಮಾಜ ಸೇವೆಗಾಗಿ ಮೀಸಲಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಸಾಮಾಜಿತ ಪ್ರಗತಿ ಸಾಧ್ಯ ಎಂಬುದನ್ನು ಬಲವಾಗಿ ನಂಬಿ ಜಾತಿ-ಮತದ ಭೇದವಿಲ್ಲದೆ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಧರ್ಮ ಭೇದವಿಲ್ಲದೆ ಧಾರ್ಮಿಕ ಕೇಂದ್ರಗಳಿಗೂ ಆರ್ಥಿಕವಾಗಿ ಸಹಾಯ ಮಾಡುವ ಇವರು, ಅನಾಥ ಮಕ್ಕಳ ಸಹಾಯಕ್ಕಾಗಿ ವಿಶೇಷ ಅನುದಾನವನ್ನು ನೀಡುತ್ತಿದ್ದಾರೆ. ಕಳೆದ ವರ್ಷದಿಂದ ಇವರು ಆರಂಭಿಸಿದ, 'ಸರಕಾರಿ ಶಾಲೆಯಲ್ಲಿ ಓದಿ ಎಸ್. ಎಸ್. ಎಲ್. ಸಿ.ಯ ಕನ್ನಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ಕೊಡಗಿನ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಯೋಜನೆ' ವಿಶೇಷವಾಗಿ ಗಮನ ಸೆಳೆದಿತ್ತು. ಮೂಲತಃ ವಿರಾಜಪೇಟೆ ಸಮೀಪದ ನಲ್ವತ್ತೋಕ್ಲು ಗ್ರಾಮದವರಾದ ಇವರು ದಿವಂಗತ ದುದ್ದಿಯಂಡ ಪಿ. ಹುಸೈನಾರ್ ಹಾಜಿ ಮತ್ತು ಆಮೀನ ಹಜ್ಜುಮ್ಮ ದಂಪತಿಯ ಪುತ್ರರಾಗಿದ್ದಾರೆ.