ಸುಂಟಿಕೊಪ್ಪ;ಜೆಸಿಐ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ

Feb 23, 2026 - 05:16
 0  282
ಸುಂಟಿಕೊಪ್ಪ;ಜೆಸಿಐ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ

ಸುಂಟಿಕೊಪ್ಪ, ಫೆ.22: ಸಮಾಜಕ್ಕೆ ಸೇವೆ ಸಲ್ಲಿಸಲು ಯುವ ಸಂಘಟನೆಗಳು ಬೆಳೆದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಅವಕಾಶಕ್ಕೆ ಜೆಸಿಐ ಸಂಸ್ಥೆಯು ನಿರಂತರ ವೇದಿಕೆ ಕಲ್ಪಿಸಿದೆ' ಎಂದು ಜೆಸಿಐ ವಲಯ-14ರ ನೂತನ ಅಧ್ಯಕ್ಷ ಪ್ರಜ್ವಲ್ ಎಸ್ ಜೈನ್ ಹೇಳಿದರು.

ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ಸಮೀಪದ ಕೆದಕಲ್ ನ ಚೆರ್ರಿ ಲಾಫ್ಟ್ ವಿಹಾರಧಾಮದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 25 ನೇ ವರ್ಷದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಜೆಸಿಐ ಪದಾಧಿಕಾರಿಗಳಿಗೆ ಅಧಿಕಾರ ಪ್ರಮಾಣ ಬೋಧಿಸಿ ಅವರು ಮಾತನಾಡಿದರು.

 ಜೆಸಿಐ ಸಂಸ್ಥೆಯು ತನ್ನ ಸಾಮಾಜಿಕ ಕಾರ್ಯಗಳೊಂದಿಗೆ ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಗೆ ಪೂರಕವಾದ ಕಾರ್ಯಗಳನ್ನು ಕೈಗೊಳ್ಳಬೇಕು. ಹಾಗೆಯೇ, ಯುವಜನಾಂಗವನ್ನು ಉತ್ತಮ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಜೆಸಿಐ ಸದಸ್ಯರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಉತ್ತಮ ಪರಿಸರ ಕಾಪಾಡುವ ದಿಸೆಯಲ್ಲಿ ನಾವು ನೆಲ- ಜಲ ಸಂರಕ್ಷಣೆ ಜತೆಗೆ ಶುದ್ಧ ಗಾಳಿ, ನೀರು ಕಲುಷಿತಗೊಳ್ಳದಂತೆ ಜಾಗೃತ ವಹಿಸಬೇಕು‘ ಎಂದು ಜೈನ್ ಹೇಳಿದರು.

25 ವರ್ಷಗಳನ್ನು ಪೂರೈಸುತ್ತಿರುವ ಸುಂಟಿಕೊಪ್ಪ ಘಟಕವು ತನ್ನ ಬೆಳ್ಳಿಹಬ್ಬ ಮಹೋತ್ಸವ ದ ಅಂಗವಾಗಿ ವಿವಿಧ ವೈವಿಧ್ಯಮಯ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಉತ್ತಮ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ಜೈನ್ ಹೇಳಿದರು.

ಅಧಿಕಾರ ಪ್ರಮಾಣ ವಚನ ಬೋಧಿಸಿದ ಸಂಸ್ಥೆಯ ವಲಯ-14 ರ ಉಪಾಧ್ಯಕ್ಷ ಗೋಣಿಬೀಡಿನ ಬಿ.ಎಂ.ಜಗತ್ ಮಾತನಾಡಿ, ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಯುವಜನಾಂಗವು ಉತ್ತಮ ನಾಯಕತ್ವಗುಣ ಬೆಳೆಸಿಕೊಳ್ಳಲು ಜೆಸಿಐ ಸಂಸ್ಥೆ ಪೂರಕವಾಗಿದೆ'. ಸತ್ಕಾರ್ಯಗಳನ್ನು ರೂಪಿಸುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದರು.

ಜೆಸಿಐ ಸಂಸ್ಥೆಯ 2021 ರ ಮಿಸ್ ಇಂಡಿಯಾ ವರ್ಲ್ಡ್ ವಿನ್ನರ್ ಆದ ಪೊನ್ನಂಪೇಟೆಯ ಕಾನಿಯಂಡ ಕಾವ್ಯ ಸಂಜು ಮಾತನಾಡಿ, ಯುವಜನಾಂಗವು ಆತ್ಮವಿಶ್ವಾಸ ಬೆಳೆಸಿಕೊಂಡು ಯಾವುದೇ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು. ಜೆಸಿಐ ಸಂಸ್ಥೆಯ ಚಟುವಟಿಕೆಗಳು ನಮ್ಮಲ್ಲಿ‌ ಛಲಗಾರಿಕೆ, ಉತ್ತಮ ನಾಯಕತ್ವ ಹಾಗೂ ದೂರದೃಷ್ಠಿ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾಗಿವೆ ಎಂದರು.

ಅಧಿಕಾರ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಸಂಸ್ಥೆಯ ನೂತನ ಅಧ್ಯಕ್ಷ ಎಂ.ಆರ್.ಜಯಪ್ರಕಾಶ್, 25 ವಸಂತಗಳನ್ನು ಪೂರೈಸುತ್ತಿರುವ ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಪಿ.ಯು.ನಂದಕುಮಾರ್ ಮಾತನಾಡಿ, ಸಂಸ್ಥೆಯ ವತಿಯಿಂದ ಕೈಗೊಂಡ ವೈವಿಧ್ಯಮಯ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು.

ಸಂಸ್ಥೆಯ ವಲಯ- 14 ರ ಮಾಜಿ ಅಧ್ಯಕ್ಷ ಕಾಯರ್ ಮಾರ್ ದೇವಿಪ್ರಸಾದ್, ಸುಂಟಿಕೊಪ್ಪ ಜೆಸಿಐ ಸಂಸ್ಥೆಯು ಬೆಳೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ನೂತನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿದರು.

ಸಂಸ್ಥೆಯ ಮಾಜಿ ಅಧ್ಯಕ್ಷರಾದ ಡೆನಿಸ್ ಡಿ'ಸೋಜ, ಮನು ಅಚ್ಚಮಯ್ಯ, ಫೆಲ್ಸಿ ಡೆನಿಸ್, ಅರುಣಕುಮಾರ್, ಕೆ.ಪಿ.ಪ್ರೀತಂ, ಬಿ.ಕೆ. ಸತೀಶ್, ಟಿ.ಜಿ.ಪ್ರೇಮಕುಮಾರ್, ಸಂಪತ್ ಕುಮಾರ್ , ಜಿ.ಬಿ.ಹರೀಶ್, ಬಿ.ಎಂ. ವೆಂಕಪ್ಪ, ನಿಕಟ ಪೂರ್ವ ಕಾರ್ಯದರ್ಶಿ ನಿಯಾಜುದ್ದೀನ್, ಎಚ್.ಆರ್. ನಿರಂಜನ್, ಪ್ರಣಿತ್ ಡಿ,ಸೋಜ, ಚೈತ್ರ ಡಿ.ಪ್ರಸಾದ್ , ಸೌಮ್ಯ ಜಯಪ್ರಕಾಶ್ ಹಾಗೂ ಪದಾಧಿಕಾರಿಗಳು ಇದ್ದರು. ಮೊನಾಲಿ ಪ್ರಸಾದ್ ಜೇಸೀವಾಣಿಯನ್ನು ವಾಚಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0