ಸುಂಟಿಕೊಪ್ಪ: ವಾಹನ ಚಾಲಕರ ಹಾಗೂ ಆಟೋ ಚಾಲಕ ಮತ್ತು ಮಾಲೀಕರ ಸಂಘದ ನಿಲ್ಧಾಣದಲ್ಲಿ ಮೇಲ್ಚಾವಣಿ ನಿರ್ಮಾಣದ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ
admincoorgdaily

ಸುಂಟಿಕೊಪ್ಪ; ಈ ಹೋಬಳಿಯ ಸರ್ವಾಂಗೀಣ ಅಭಿವೃದ್ಧಿಗೆ ತಾವು ಸಾಧ್ಯವಿರುವ ಎಲ್ಲಾ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದರು.
ಸುಂಟಿಕೊಪ್ಪದ ವಾಹನ ಚಾಲಕರ ಹಾಗೂ ಆಟೋ ಚಾಲಕ ಮತ್ತು ಮಾಲೀಕರ ಸಂಘದ ನಿಲ್ಧಾಣದಲ್ಲಿ ಮೇಲ್ಚಾವಣಿ ನಿರ್ಮಾಣದ ಕಾಮಗಾರಿಗೆ ಮಂಗಳವಾರ ಸಂಜೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಕಾಮಗಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ನಿರ್ಮಾಣ ನಿಗಮಕ್ಕೆ ವಹಿಸಲಾಗಿದ್ದು, ಶಾಸಕರ ಅನುದಾನ ರೂ 40 ಲಕ್ಷ ನಿಗಧಿಗೊಳಿಸಲಾಗಿದ್ದು, ಅನುದಾನ ಈ ಕಾಮಗಾರಿಗೆ ಸಾಕಾಗುವುದಿಲ್ಲ. ಆದರೆ ಬೇಕಾಗುವ ಅನುದಾನವನ್ನು ಒದಗಿಸುವ ಜವಾಬ್ಧಾರಿ ನಮ್ಮದು ಎಂದು ಅವರು ಹೇಳಿದರು.
ಕಾಮಗಾರಿಯ ಸಂದರ್ಭ ಸಾರ್ವಜನಿಕರು,ವಾಹನ ಚಾಲಕರು ಮತ್ತು ಆಟೋ ಚಾಲಕರು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕಾಗಿರುವುದು ಅತ್ಯಗತ್ಯವೆಂದು ಅವರು ಹೇಳಿದರಲ್ಲದೇ, ಕಾಮಗಾರಿ ಕುರಿತು ಅಭಿಯಂತರರು ಮೇಲ್ಚಾವಣಿ ವಿನ್ಯಾಸದ ಬಗ್ಗೆ ಮಾಹಿತಿ ನೀಡಬೇಕೆಂದು ನಿರ್ದೇಶನ ನೀಡಿದರು.
ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ನೂತನ ಮಾರುಕಟ್ಟೆಯ ಬಗ್ಗೆ ಕಾರ್ಯಕ್ರಮ ರೂಪಿಸಬೇಕಾಗಿದ್ದು, ನೂತನ ಮಾರುಕಟ್ಟೆಗೆ ಸ್ಥಳಾಂತರಗೊಂಡ ನಂತರವೇ ಹಳೆಯ ಮಾರುಕಟ್ಟೆಯನ್ನು ಬಸ್‌ನಿಲ್ಧಾಣವಾಗಿ ಪರಿವರ್ತಿಸಬಹುದು. ಒಂದು ವೇಳೆ ಕೆಎಸ್‌ಆರ್‌ಟಿಸಿಗೆ ಈ ಜಾಗವನ್ನು ನೀಡಿದರೆ ಖಾಸಗಿ ಬಸ್‌ಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸುಂಟಿಕೊಪ್ಪ ಹೋಬಳಿಯ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕರು ಸಿದ್ದರಾಗಿದ್ದು, ಆನೇಕ ಗ್ರಾಮ ಪಂಚಾಯಿತಿಗಳ ದಶಕಗಳ ಸಮಸ್ಯೆಯನ್ನು ಪರಿಹರಿಸುತ್ತಾ ಬಂದಿದ್ದಾರೆ. ಅದೇ ದಶಕಗಳ ಬೇಡಿಕೆಯಾದ ಮೇಲ್ಚಾವಣಿ ನಿರ್ಮಾಣದ ಕನಸ್ಸು ನನಸಾಗುವ ದಿನಗಳು ನಮ್ಮ ಮುಂದೆ ಇರುವುದು ಸಂತಸದ ವಿಚಾರವಾಗಿದೆ.ನೂತನ ತಾಲೂಕು ಮತ್ತು ನೂತನ ಶಾಸಕರು ಅತ್ಯಂತ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದ್ದು ಜನರ ಬಹುಬೇಡಿಕೆಗಳ ಈಡೇರಿಕೆಗೆ ದೆಹಲಿಯವರೆಗೂ ಹೋಗಲು ಅವರು ಸಿದ್ಧರಿದ್ದು ನಾವು ಅವರನ್ನು ಸದುದ್ದೇಶದಿಂದ ಜನೋಪಯೋಗಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ ವಹಿಸಿದ್ದರು. ಈ ಸಭೆಯನ್ನು ಉದ್ದೇಶಿಸಿ ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಯು.ರಫೀಕ್‌ಖಾನ್ ಸುಂಟಿಕೊಪ್ಪ ಸಮಸ್ಯೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭ ಆಟೋಚಾಲಕರ ಸಂಘದ ಅಧ್ಯಕ್ಷ ಶರೀಫ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಕೆ.ಇ.ಕರೀಂ, ಶಿವಮ್ಮ ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಮಣಿ, ಕಾಂಗ್ರೆಸ್ ಮುಖಂಡ ಯಂಕನ ಶ್ರೀರಾಮ್, ಕಾನ್‌ಬೈಲ್ ಕಾಂಗ್ರೆಸ್ ಅಧ್ಯಕ್ಷ ಆದಂ ಹಾಗೂ ಪಂಚಾಯಿತಿ ಪೌರಕಾರ್ಮಿಕರು ಸೇರಿದಂತೆ ವಾಹನಚಾಲರು ಸಾರ್ವಜನಿಕರು ಇದ್ದರು.